ಮೂಡಲಗಿ: ಸಾಲ ಮರು ಪಾವತಿಸಲು ವಿಳಂಬ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಖಾಸಗಿ ಫೈನಾನ್ಸ್ ಅಧಿಕಾರಿಗಳು ಬಾಣಂತಿ ಸಮೇತ ರೈತ ಕುಟುಂಬಸ್ಥರನ್ನು ಹೊರ ಹಾಕಿ ಮನೆ ಜಪ್ತಿ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ನಾಗನೂರ ಗ್ರಾಮದ ಸೈದಪ್ಪ ಗದಾಡಿ ಎಂಬುವವರು ಹೈನುಗಾರಿಕೆ, ಕೃಷಿ ಚಟುವಟಿಕೆಗಾಗಿ ತಮಿಳುನಾಡು ಮೂಲದ ಖಾಸಗಿ ಪೈನಾನ್ಸ್‌ನಿಂದ 5 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ತದನಂತರ ಹೈನುಗಾರಿಕೆ ಆದಾಯ ಬಂದಂತೆ ಹಂತ ಹಂತವಾಗಿ 3 ಲಕ್ಷಕ್ಕಿಂತ ಹೆಚ್ಚಿನ ಹಣ ಪಾವತಿ ಮಾಡಿದ್ದಾರೆ. ಬಾಕಿ ಉಳಿದಿರುವ ಹಣ ಪಾವತಿಸಲು ಸಮಯ ಕೇಳಿದ್ದರು. ಆದರೆ, ಬ್ಯಾಂಕ್‌ನವರು ಕೋರ್ಟ್ ಮೊರೆ ಹೋಗಿ, ಕೋರ್ಟ್‌ನಿಂದ ಮನೆ ಜಪ್ತಿ ಆದೇಶವಾಗಿದ್ದರಿಂದ ಸೋಮವಾರ ವಕೀಲರು, ಕೋರ್ಟ್ ಸಿಬ್ಬಂದಿ ಹಾಗೂ ಪೊಲೀಸರು ಸೇರಿ ಮನೆ ಜಪ್ತಿ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಬಾಣಂತಿ, ಮಗು ಹಾಗೂ ಹಿರಿಯ ವೃದ್ಧರನ್ನು ಮನೆಯಿಂದ ಹೊರ ಹಾಕಿದ್ದಾರೆ.
ಮನೆಯಿಂದ ಬೀದಿಗೆ ಬಿದ್ದ ಬಾಣಂತಿ ಮತ್ತು ಮಗು ಉಳಿದುಕೊಳ್ಳಲು ಪರ್ಯಾಯ ವ್ಯವಸ್ಥೆ ಇಲ್ಲದಿರುವ ಕಾರಣ ಕುಟುಂಬರಸ್ಥರೆಲ್ಲರೂ ರಸ್ತೆಯ ಬದಿಯ ಟೆಂಟ್‌ನಲ್ಲಿಯೇ ಊಟವಿಲ್ಲದೆ ರಾತ್ರಿ ಕಳೆದಿದ್ದಾರೆ. ಅಲ್ಲದೆ, ಮಗುವಿಗೆ ಹಾಲು ಕೊಡಲು ಸಾಧ್ಯವಾಗದೆ ಬಾಣಂತಿ ಕಣ್ಣೀರು ಹಾಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಫೈನಾನ್ಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರೈತ ಸಂಘಟನೆಗಳು ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿವೆ.
ಗ್ರಾಮಕ್ಕೆ ಸಿಡಿಪಿಒ ಭೇಟಿ ಪರಿಶೀಲನೆ: ನಾಗನೂರ ಗ್ರಾಮದ ಹನುಮ ನಗರದಲ್ಲಿ ಮನೆ ಜಪ್ತಿ ಮಾಡಿ ಬಾಣಂತಿ ಹೊರ ಹಾಕಿದ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಮೂಡಲಗಿ ಸಿಡಿಪಿಒ ಯಲ್ಲಪ ಗದಾಡಿ ಅವರು ಬಾಣಂತಿ ಹಾಗೂ ಮಗುವಿನ ಆರೋಗ್ಯ ಬಗ್ಗೆ ವಿಚಾರಿಸಿದರು. ಬಳಿಕ ಅಂಗನವಾಡಿ ಕೇಂದ್ರದಿಂದ ಪೌಷ್ಟಿಕ ಆಹಾರ, ಹಾಲಿನ ಪಾಕೆಟ್, ದಿನಸಿ ವಸ್ತು ಗಳನ್ನು ಸರಬರಾಜು ಮಾಡಿ ಸಂಬಂಧಿಕರ ಮನೆಗೆ ಬಾಣಂತಿಯನ್ನು ಸೇರಿಸಿದ್ದಾರೆ.ಬಾಣಂತಿ ಮತ್ತು ಮಗುವಿನ ಆರೋಗ್ಯ ಬಗ್ಗೆ ನಿಗಾ ಇಡುವಂತೆ ಸ್ಥಳೀಯ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಿದ್ದಾರೆ.