ಹೊಸಕೋಟೆ: ನಗರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ದೊಡ್ಡ ಸಮಸ್ಯೆಯಾಗಿದ್ದು, 1 ಕೋಟಿ ರೂಪಾಯಿಗೂ ಹೆಚ್ಚಿನ ಬಾಡಿಗೆ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಬಾಡಿಗೆ ಪಾವತಿಸದ ಮಾಲೀಕರ ಭಾವಚಿತ್ರಗಳನ್ನು ಆಯಾ ಮಳಿಗೆ ಮುಂದೆ ಪ್ರದರ್ಶಿಸಲು ಹೊಸಕೋಟೆ ನಗರಸಭೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಮಧ್ಯ ಭಾಗದಲ್ಲಿರುವ ಮಾಂಸದ್ ಮಾರುಕಟ್ಟೆ ತೆರವುಗೊಳಿಸಿ ನಗರದಿಂದ ಹೊರಭಾಗದಲ್ಲಿ ಸ್ಥಾಪಿಸಬೇಕು. ಈ ಬಗ್ಗೆ ಸರ್ವೇ ನಂ 300ರಲ್ಲಿ ಜಾಗ ನಿಗದಿಪಡಿಸಿದ್ದರೂ ಕಾರ್ಯರೂಪಕ್ಕೆ ತರಲಾಗಿಲ್ಲ ಎಂಬ ಬಗ್ಗೆ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು.
ಈ ಭಾಗದಲ್ಲಿ ಹಲವು ವರ್ಷದಂದ ಕಸಾಯಿಖಾನೆ ಇದೆ. ಈಗ ಸಮಸ್ಯೆಯಾಗುತ್ತದೆ ಎಂದರೆ ಹೇಗೆ ಹೈಟೆಕ್ ಕಸಾಯಿಖಾನೆ ಮಾದರಿಯಲ್ಲಿ ಈಗಿರುವ ಸ್ಥಳ ಅಭಿವೃದ್ಧಿಪಡಿಸಿದರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರ್ವಹಣೆ ಮಾಡಬಹುದು. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಲವು ಸದಸ್ಯರು ಒತ್ತಾಯಿಸಿದರು.
ನಗರದ ಬಿಎಂಟಿಸಿ ಬಸ್ ಟರ್ಮಿನಲ್‌ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿಡಲು ತೀರ್ಮಾನಿಸಲಾಯಿತು ಹಾಗೂ ನಗರದಲ್ಲಿ ನಗರದ ಮುಖ್ಯ ರಸ್ತೆಗಳಿಗೆ ಗಣ್ಯರ ಹೆಸರಿರುವ ನಾಮಫಲಕಗಳನ್ನು ತೆರವುಗೊಳಿಸುವುದು, ನಗರದಲ್ಲಿ ರಥಬೀದಿ ಅಭಿವೃದ್ಧಿಗೆ ಕಾಮಗಾರಿ ನಡೆಯುತ್ತಿದ್ದು, ಹೊಸಕೋಟೆ ಜಾತ್ರೆ ಸಮಯಕ್ಕೆ ಸಂಪೂರ್ಣಗೊಳಿಸಲಾಗುವುದು ಎಂದು ಅಧ್ಯಕ್ಷ ಡಿ.ಕೆ ನಾಗರಾಜ್ ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ: 17ನೇ ವಾರ್ಡ್‌ನ ಪಕ್ಷೇತರ ಸದಸ್ಯ ಮುಭಾರಕ್ ರೋಷನ್‌ರನ್ನು ನೂತನ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಸರ್ವಾನು ಮತದಿಂದ ನೇಮಕ ಮಾಡಲಾಯಿತು.
ಪಕ್ಷ ಭೇದ ಮರೆತು ದುಡಿಯೋಣ: ನಗರಸಭೆಯಲ್ಲಿ ಪಕ್ಷ ಭೇದ ಮರೆತು ಎಲ್ಲ ಸದಸ್ಯರು ಒಟ್ಟಾಗಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಮಾದರಿ ನಗರವನ್ನಾಗಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್ ಹೇಳಿದರು. ನಗರದಲ್ಲಿ ಅಪಘಾತ ಹಾಗೂ ಅಕ್ರಮ ಚಟುವಟಿಕೆ ತಡೆಯಲು ಪೊಲೀಸ್ ಇಲಾಖೆ ಸಹಯೋಗದಲ್ಲಿ 68 ಲಕ್ಷ ರೂ.ವೆಚ್ಚದಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಸ ವಿಲೇವಾರಿ ರಾಜಕೀಯ: ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ವಿಲೇವಾರಿಗೆ ಶಾಸಕ ಶರತ್‌ಬಚ್ಚೇಗೌಡ ಸೂಕ್ತ ಜಾಗ ನಿಗದಿಪಡಿಸಿದಲ್ಲಿ ಕಸದ ಸಮಸ್ಯೆ ಬಗೆಹರಿಯಲಿದೆ. ಈ ವಿಚಾರದಲ್ಲಿ ಶಾಸಕರ ಬೆಂಬಲಿಗರು ಸಹಕರಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ಸದಸ್ಯ ಕೇಶವ್‌ಮೂರ್ತಿ, ಮೂರು ಬಾರಿಯಿಂದ ನಿಮ್ಮ ಬೆಂಬಲಿಗರೇ ನಗರಸಭೆ ಆಡಳಿತದಲ್ಲಿದ್ದಾರೆ, ಎಂಟಿಬಿ ನಾಗರಾಜ್ 5 ವರ್ಷ ಶಾಸಕರಾಗಿ ನಂತರ ಮಂತ್ರಿಯಾಗಿ ಕಾರ್ಯನಿರ್ವಹಿಸಿದರೂ ಕಸದ ಸಮಸ್ಯೆ ಏಕೆ ಬಗೆಹರಿಯಲಿಲ್ಲ ಎಂದು ಪ್ರಶ್ನಿಸಿದರು. ಇದು ಕೆಲ ಸಮಯ ಸಭೆಯಲ್ಲಿ ಗದ್ದಲದ ವಾತಾರಣಕ್ಕೆ ಕಾರಣವಾಯಿತು. ಮಧ್ಯೆ ಪ್ರವೇಶಿಸಿದ ಅಧ್ಯಕ್ಷ ಡಿಕೆ.ನಾಗರಾಜ್ ಶಾಸಕರು ಸಚಿವರು ಹಾಗೂ ಸಂಸದರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಹೇಳಿ ಗದ್ದಲಕ್ಕೆ ತೆರೆ ಎಳೆದರು.