ಬಾಗೇಪಲ್ಲಿ : ಮುಂಬರುವ ವಿಧಾನಸಭೆ ಚುನಾವಣೆಗೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಜೆಪಿ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಕರೆ ನೀಡಿದರು.
ತಾಲೂಕು ಪಂಚಾಯತಿ ಕಾರ್ಯಾಲಯದ ಮುಂಭಾಗದಲ್ಲಿ ಸೋಮವಾರ ಬಿಜೆಪಿ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಕೆ.ಸುಧಾಕರ್ ಬಿಜೆಪಿಯ ಬಾವುಟ ಹಾರಿಸಿ, ಸಚಿವರಾಗಿದ್ದಾರೆ. ಅದೇರೀತಿ ಜಿಲ್ಲೆಯ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು.
ಎಪಿಎಂಸಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಚುಕ್ಕಾಣಿ ಹಿಡಿದಿರುವುದು ಮುಂದಿನ ಗೆಲುವಿನ ಸೂಚನೆಯಾಗಿದೆ, ಮುಂಬರುವ ಸ್ಥಳೀಯ ಸಂಸ್ಥೆ, ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.ಕರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಕಾರ್ಉಕರ್ತರು ಪರಸ್ಪರ ಅಂತರ ಕಾಯ್ದುಕೊಂಡು ಬರಬೇಕು. ಪಕ್ಷದ ಸಭೆ, ಸಮಾರಂಭದಲ್ಲಿ ಭಾಗವಹಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಜತೆಯಲ್ಲಿ ಇಟ್ಟುಕೊಳ್ಳಬೇಕು ಎಂದು ರಾಜ್ಯ ವಿಭಾಗೀಯ ಮಟ್ಟದ ಉಸ್ತುವಾರಿ ಗೀತಾ ವೀವೇಕಾನಂದರೆಡ್ಡಿ ಸಲಹೆ ನೀಡಿದರು.ವಿವಿಧ ಪಕ್ಷಗಳು 80ಕ್ಕೂ ಹೆಚ್ಚು ಕಾರ್ಯಕರ್ತರು ಮಂಡಲಾಧ್ಯಕ್ಷ ಆರ್.ಪ್ರತಾಪ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ವಿಭಾಗೀಯ ಮಟ್ಟದ ಸಂಘಟನಾ ಕಾರ್ಯದರ್ಶಿ ಕಾಂತರಾಜ್, ಎಪಿಎಂಸಿ ಅಧ್ಯಕ್ಷ ಸೋಮಶೇಖರರೆಡ್ಡಿ, ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ಗುಡಿಬಂಡೆ ಮಂಡಲಾಧ್ಯಕ್ಷ ಗಂಗಿರೆಡ್ಡಿ, ಮಾಜಿ ಅಧ್ಯಕ್ಷ ಎಸ್.ಟಿ.ಚಂದ್ರಮೋಹನ್‌ಬಾಬು, ಪ್ರಧಾನ ಕಾರ್ಯದರ್ಶಿ ಪ್ರಭಾಕರರೆಡ್ಡಿ, ಮುಖಂಡರಾದ ವೈ.ಎಸ್.ಲೋಕೇಶ್, ಪಿ.ಸುರೇಶ್, ನಿರ್ಮಲಮ್ಮ, ಬಿ.ವಿ.ಕೃಷ್ಣಯ್ಯ, ದಾಸಯ್ಯಗಾರಿಪಲ್ಲಿ ನಾಗಪ್ಪ, ವನಜಾ ಇತರರಿದ್ದರು.