ಬಾಗೇಪಲ್ಲಿ: ಕೃಷಿ ಉತ್ಪನ್ನ ವಾರುಕಟ್ಟೆ ಸಮಿತಿ ಬಿಜೆಪಿ ಬೆಂಬಲಿತ ಅಧ್ಯಕ್ಷ ಎಸ್.ಸೋಮಶೇಖರರೆಡ್ಡಿ ಹಾಗೂ ಉಪಾಧ್ಯಕ್ಷ ಕೆ.ಆರ್.ಆಂಜಿನಪ್ಪ ಪರಸ್ಪರ ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಗಿದ್ದು, ಇಬ್ಬರನ್ನೂ ಯಥಾ ಸ್ಥಾನದಲ್ಲೇ ಮುಂದುವರಿಸಲು ಜಂಟಿ ನಿರ್ದೇಶಕರು ಆದೇಶ ನೀಡಿದ್ದಾರೆ.
ಎಪಿಎಂಸಿ ಕಚೇರಿಯಲ್ಲಿ ಜಂಟಿ ನಿರ್ದೇಶಕ ಡಾ.ವಿ.ರಾಜಣ್ಣ ಅಧ್ಯಕ್ಷತೆಯಲ್ಲಿ ಮಂಗಳವಾರ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆ ನಿಗದಿಯಾಗಿತ್ತು. ಸರ್ಕಾರಿ ನಾಮ ನಿರ್ದೇಶನ ಸದಸ್ಯರು ಹೊರತುಪಡಿಸಿ 13 ಸದಸ್ಯರ ಪೈಕಿ 5 ಸದಸ್ಯರು ವಾತ್ರ ಅಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಉಪಾಧ್ಯಕ್ಷ ಕೆ.ಆರ್.ಆಂಜಿನಪ್ಪ ವಿರುದ್ಧ ಅಧ್ಯಕ್ಷ ಮಂಡಿಸಿದ ಅವಿಶ್ವಾಸಕ್ಕೆ 13 ಸದಸ್ಯರ ಪೈಕಿ 4 ಸದಸ್ಯರು ವಾತ್ರ ಅವಿಶ್ವಾಸ ಸೂಚಿಸಿದರು. ಬಹುಮತದ ಕೊರತೆಯಿಂದ ಇಬ್ಬರು ಮಂಡಿಸಿದ ಗೊತ್ತುವಳಿ ಅಂಗೀಕಾರವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಸೋಮಶೇಖರರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಆಂಜಿನಪ್ಪ ಅವರನ್ನೇ ಮುಂದುವರಿಸಲು ಜಂಟಿ ನಿರ್ದೇಶಕ ಡಾ.ವಿ.ರಾಜಣ್ಣ ಸೂಚಿಸಿದರು.
ಬಿಜೆಪಿಯವರೇ ಆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಪರಸ್ಪರ ಅವಿಶ್ವಾಸ ಗೊತ್ತುವಳಿ ಮಂಡಿಸಿಕೊಂಡಿರುವುದರಿಂದ ಪಕ್ಷವು ತಾಲೂಕಿನಲ್ಲಿ ನಗೆ ಪಾಟಲಿಗೆ ಗುರಿಯಾಗಿದೆ.
ಸಚಿವರ ವಾತಿಗೂ ಬೆಲೆ ಇಲ್ಲ: ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಇಬ್ಬರೂ ಬಿಜೆಪಿ ಬೆಂಬಲಿತರಾಗಿದ್ದರೂ, ಪಕ್ಷದಲ್ಲಿ ಭುಗಿಲೆದ್ದ ಗುಂಪುಗಾರಿಕೆ, ಭಿನ್ನಾಭಿಪ್ರಾಯಗಳಿಂದ ವಾರುಕಟ್ಟೆ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸ್ವಪಕ್ಷೀಯರಿಂದಲೇ ಅವಿಶ್ವಾಸ ಗೊತ್ತುವಳಿ ಮಂಡಿಸಿರುವುದರಿಂದ ಬಿಜೆಪಿ ವಾನ ಮರ್ಯಾದೆ ಬೀದಿಗೆ ಬಂದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ರಾಜಿ ಸಂಧಾನದ ಸಭೆ ನಡೆದಿದ್ದರೂ ವರಿಷ್ಠರ ಹಾಗೂ ಸಚಿವರ ವಾತಿಗೆ ಬೆಲೆ ನೀಡದೆ ಪಕ್ಷ ವಿರೋಧಿ ಚಟುವಟಿಕೆೆಗೆ ಕೆಲವರು ಮುಂದಾಗಿದ್ದಾರೆಂಬ ವಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.
‘ಕೈ’ ಇಂದ ಜಾರಿದ್ದ ಅಧಿಕಾರ: ಎಪಿಎಂಸಿ ಒಟ್ಟು 16 ನಿರ್ದೇಶಕರ ಸಂಖ್ಯಾಬಲ ಹೊಂದಿದ್ದು,ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳು ಈ ಹಿಂದೆ ಕಾಂಗ್ರೆಸ್ ವಶದಲ್ಲಿದ್ದವು. ಕೈನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯಗಳಿಂದ 2020ರ ಜೂ.10 ರಂದು ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್.ಸೋಮಶೇಖರರೆಡ್ಡಿ ಪರ ಮತ ಚಲಾಯಿಸಿ ಬೆಂಬಲ ಸೂಚಿಸಿದ್ದರಿಂದ ಎಸ್.ಸೋಮಶೇಖರರೆಡ್ಡಿ 1 ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿಯಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ.ಎನ್.ರಾಮಚಂದ್ರಪ್ಪ 7 ಮತಗಳು ಪಡೆದು ಪರಾಭವಗೊಂಡಿದ್ದರು. ಮತದಾನದ ವೇಳೆ ಒಬ್ಬ ಸದಸ್ಯರು ಗೈರಾಗಿದ್ದರು.