ಗುಡ್ಡೆತೋಟ ಗ್ರಾಮ ಪಂಚಾಯಿತಿಯ ಬಾಗಿಲುಗದ್ದೆ ಬಳಿ ಕಬ್ಬಿಣದ ಸೇತುವೆ ಜೋಡಿಸಲಾಯಿತು. 
ಜಿಲ್ಲೆ

ಬಾಗಿಲುಗದ್ದೆ ಗ್ರಾಮದಲ್ಲಿ ಕಬ್ಬಿಣದ ಸೇತುವೆ ನಿರ್ಮಾಣ

ಜಯಪುರ: ಸೇತುವೆ ಇಲ್ಲದೆ ಪರದಾಡುತ್ತಿದ್ದ ಬಾಗಿಲುಗದ್ದೆ ಗ್ರಾಮಕ್ಕೆ ಕೊಗ್ರೆಯಿಂದ ಕಬ್ಬಿಣದ ಸೇತುವೆಯನ್ನು ಸ್ಥಳಾಂತರಿಸಿ ನಿರ್ಮಿಸಿಕೊಡಲಾಗಿದೆ.

ಗುಡ್ಡೆತೋಟ ಗ್ರಾಪಂ ವ್ಯಾಪ್ತಿಯ ಭೈರೆದೇವರು ಗ್ರಾಮದ ಕೊಗ್ರೆ ಬಳಿ ಹಳೇ ಸೇತುವೆ ಕುಸಿತವಾದ ಕಾರಣ ಜಿಲ್ಲಾಧಿಕಾರಿಗಳ ವಿಶೇಷ ಅನುದಾನ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ತಾತ್ಕಾಲಿಕ ಕಬ್ಬಿಣ ಸೇತುವೆಯನ್ನು 2021ರಲ್ಲಿ ನಿರ್ಮಿಸಲಾಗಿತ್ತು. ನಂತರ ಕೊಗ್ರೆ ಬಳಿ 3.5 ಕೋಟಿ ರೂ. ಅನುದಾನದಲ್ಲಿ ಸುಸಜ್ಜಿತ ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಹೊಸ ಸೇತುವೆ ನಿರ್ಮಾಣದ ನಂತರ ಒಂದು ವರ್ಷದಿಂದ ಕಬ್ಬಿಣದ ತಾತ್ಕಾಲಿಕ ಸೇತುವೆ ತುಕ್ಕು ಹಿಡಿಯುತ್ತಿತ್ತು. ಇದನ್ನು ಗಮನಿಸಿದ ಗುಡ್ಡೆತೋಟ ಗ್ರಾಪಂ ಮಾಜಿ ಅಧ್ಯಕ್ಷರಾದ ಕೀರ್ತಿ ಸುಂದರರಾಜ್ ಹಾಗೂ ಪ್ರಶಾಂತ್ ಜಾಲ್ಮರ ಅವರ ನೇತತ್ವದ ತಂಡ, ಪಿಡಬ್ಲುೃಡಿ ಅಧಿಕಾರಿಗಳ ಅನುಮತಿ ಪಡೆದು ಜಯಪುರ ಪೊಲೀಸರು ಹಾಗೂ ಗ್ರಾಪಂ ಸದ್ಯಸ್ಯರು ಮತ್ತು ಗ್ರಾಮಸ್ಥರ ಸಹಕಾರದಿಂದ ಬಾಗಿಲುಗದ್ದೆ ಗ್ರಾಮಕ್ಕೆ ಸೇತುವೆಯನ್ನು ಸ್ಥಳಾಂತರ ಮಾಡಿದ್ದಾರೆ.

ಬಹಳ ವರ್ಷಗಳ ಹಿಂದೆಯೇ ಬಾಗಿಲುಗದ್ದೆಗೆ ಸೇತುವೆ ನಿರ್ಮಿಸಲು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಈಗ ಕಬ್ಬಿಣ ಸೇತುವೆ ಸ್ಥಳಾಂತರ ಮಾಡಿರುವುದರಿಂದ ಬಾಗಿಲುಗದ್ದೆ, ಹಂದಿಹಡ್ಲು ಹಾಗೂ ಇಂಬಳಗೋಡಿಗೆ ಜನ ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ. ಸೇತುವೆಯು ಸುಮಾರು 15 ಮೀಟರ್ ಉದ್ದವಿದ್ದು, ಸಂಪೂರ್ಣ ಕೆಲಸ ಆದರೆ ಲಘು ವಾಹನಗಳು ಸಂಚರಿಸಬಹುದು.