ಚಾಮರಾಜನಗರ : ‘ನಮ್ಮೂರ ಸರ್ಕಾರಿ ಶಾಲೆಯಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಕೊನೆಗೆ ಉಳಿದುಕೊಂಡ ನನ್ನ ಮಗಳಿಗೆ ಸಹಪಾಠಿಗಳೇ ಇಲ್ಲದಂತಾಯಿತು. ನಾನೂ ನನ್ನ ಮಗಳನ್ನು ಬೇರೆ ಶಾಲೆಗೆ ಸೇರಿಸಿದೆ. ನಂತರ ನಮ್ಮೂರ ಸರ್ಕಾರಿ ಶಾಲೆ ಬಾಗಿಲು ಹಾಕಿತು’.
ಚಾಮರಾಜನಗರ ತಾಲೂಕಿನ ಗೋವಿಂದವಾಡಿ(ಕಲ್ಪುರ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಕುಸಿಯುತ್ತಿದ್ದ ಸಂದರ್ಭದಲ್ಲಿ ಕೊನೆಯವರೆಗೂ ಉಳಿದಿದ್ದ ವಿದ್ಯಾರ್ಥಿನಿ ತಂದೆ, ಸಾವಯವ ಕೃಷಿಕ ನಟರಾಜು ಅವರ ನುಡಿಗಳಿವು. ದಾಖಲಾತಿ ಕೊರತೆಯಿಂದ ತಾತ್ಕಾಲಿಕವಾಗಿ ಮುಚ್ಚಿರುವ ಸರ್ಕಾರಿ ಶಾಲೆಗಳಲ್ಲಿ ಉಳಿದಿದ್ದ ಕಟ್ಟಕಡೆಯ ವಿದ್ಯಾರ್ಥಿಯ ಪಾಲಕರೆಲ್ಲರ ಅಸಹಾಯಕತೆಯನ್ನು ನಟರಾಜು ಪ್ರತಿನಿಧಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬಾಗಿಲು ಹಾಕಿರುವ ಸರ್ಕಾರಿ ಶಾಲೆಗಳ ಆವರಣದಲ್ಲಿ ಆವರಿಸಿರುವ ಶೂನ್ಯತೆಗೆ ಮಕ್ಕಳ ಸದ್ದು ಗದ್ದಲವೇ ಮದ್ದು. ಆದರೇನು ಮಾಡುವುದು ಹಲವು ಕಾರಣಗಳಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಬರುತ್ತಿದೆ.
ಮುಚ್ಚಿರುವ ಶಾಲೆಗಳೆಷ್ಟು?: ಜಿಲ್ಲೆಯಲ್ಲಿ ಮಕ್ಕಳ ದಾಖಲಾತಿ ಕೊರತೆ ಹಿನ್ನೆಲೆಯಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ಒಟ್ಟು 24 ಸರ್ಕಾರಿ ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಿದ್ದವು. ಇದರಲ್ಲಿ 4 ಶಾಲೆಗಳು ಪುನರಾರಂಭಗೊಂಡಿವೆ.
ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಕಚೇರಿ ನೀಡಿರುವ ಮಾಹಿತಿ ಪ್ರಕಾರ, 2023-24ನೇ ಸಾಲಿನಲ್ಲಿ ಚಾಮರಾಜನಗರ ತಾಲೂಕಿನಲ್ಲಿ ಸಾಣೇಗಾಲ, ಕಳ್ಳಿಪುರ, ಪುಟ್ಟೇಗೌಡನಹುಂಡಿ, ಕಿರಗಸೂರು, ಹೊಸಹಳ್ಳಿ ಮತ್ತು ಗುಂಡ್ಲುಪೇಟೆ ತಾಲೂಕಿನಲ್ಲಿ ಹೊಸಪುರ, ಬರಗಿ, ಉತ್ತೇನಗೆರೆಹುಂಡಿ, ಮೇಲುಕಾಮನಹಳ್ಳಿ, ಮರಳಾಪುರ ಮತ್ತು ಕೊಳ್ಳೇಗಾಲ ತಾಲೂಕಿನಲ್ಲಿ ಲಕ್ಕರಸನಪಾಳ್ಯ, ದಾಸನಹುಂಡಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಿದ್ದವು. ಇವುಗಳಲ್ಲಿ ಕಿರಗಸೂರು, ಹೊಸಪುರ, ಉತ್ತೇನಗೆರೆಹುಂಡಿ, ಲಕ್ಕರಸನಪಾಳ್ಯದಲ್ಲಿ ಶಾಲೆಗಳು ಮರು ಆರಂಭವಾಗಿವೆ.
2024-25ನೇ ಸಾಲಿನಲ್ಲಿ ಚಾಮರಾಜನಗರ ತಾಲೂಕಿನಲ್ಲಿ ಮೂಡ್ಲುಪುರ, ಗೆಜ್ಜಲ್‌ಪಾಳ್ಯ, ಮೂಡಲಹೊಸಳ್ಳಿ, ಅಂಚಿತಾಳಪುರ, ಗೋವಿಂದವಾಡಿ(ಕಲ್ಪುರ), ಕುರುಬರಹುಂಡಿ ಮತ್ತು ಗುಂಡ್ಲಪೇಟೆ ತಾಲೂಕಿನ ಹುತ್ತೂರು, ಕಬ್ಬಳ್ಳಿ, ಈಗ್ಲಾ ಮೊಹಲ್ಲಾ, ಹಕ್ಕಲಪುರ, ಹನೂರು ತಾಲೂಕಿನ ಚಂಗಡಿ, ಎಡಳಿದೊಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಮುಚ್ಚಿವೆ.
2023-24ನೇ ಸಾಲಿನಲ್ಲಿ ತಾತ್ಕಾಲಿಕವಾಗಿ ಮುಚ್ಚಿದ ಶಾಲೆಗಳ ಮಕ್ಕಳು ಹತ್ತಿರದ ಶಾಲೆಗಳಿಗೆ ಸೇರಿಕೊಂಡಿದ್ದಾರೆ. ಚಾಮರಾಜನಗರ ತಾಲೂಕಿನ ಸಾಣೇಗಾಲದ ಶಾಲೆಯ 4 ವಿದ್ಯಾರ್ಥಿಗಳು ಬಡಗಲಪುರದ ಶಾಲೆಗೆ ಸೇರಿದವು. ಇದೇ ರೀತಿ ಕಳ್ಳಿಪುರ ಶಾಲೆಯ 5 ಮಕ್ಕಳು ಮಸಣಾಪುರ ಶಾಲೆಗೆ, ಪುಟ್ಟೇಗೌಡನಹುಂಡಿ ಶಾಲೆಯ 2 ಮಕ್ಕಳು ಹೊನ್ನೇಗೌಡನಹುಂಡಿಗೆ, ಕಿರಗಸೂರಿನಲ್ಲಿ ಇದ್ದ 2 ಮಕ್ಕಳು ಮರಳಿ ಇದೇ ಶಾಲೆಗೆ ದಾಖಲಾದ ಹಿನ್ನೆಲೆಯಲ್ಲಿ ಶಾಲೆ ಪುನರಾರಂಭವಾಯಿತು. ಹೊಸಹಳ್ಳಿ ಶಾಲೆಯ 2 ಮಕ್ಕಳು ಹರವೆಗೆ ಸೇರಿದವು. ಮೇಲುಕಾಮನಹಳ್ಳಿಯ 3 ವಿದ್ಯಾರ್ಥಿಗಳು ಇಲ್ಲೇ ಇರುವ ಕರ್ನಾಟಕ ಪಬ್ಲಿಕ್ ಶಾಲೆಗೆ, ಬರಗಿ ಕಾಲನಿಯ 20 ವಿದ್ಯಾರ್ಥಿಗಳಲ್ಲಿ 14 ಮಕ್ಕಳು ಆಶ್ರಮ ಶಾಲೆಗೆ, 6 ವಿದ್ಯಾರ್ಥಿಗಳು ಬರಗಿ ಸರ್ಕಾರಿ ಶಾಲೆಗೆ ಸೇರಿದವು. ಮರಳಾಪುರ ಶಾಲೆಯ 5 ವಿದ್ಯಾರ್ಥಿಗಳು ಸೋಮಹಳ್ಳಿ ಶಾಲೆಗೆ ಸೇರಿಕೊಂಡಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕೊರತೆ ಎದುರಾದರೆ ಉಳಿದ ಬೆರಳೆಣಿಕೆಯಷ್ಟು ಮಕ್ಕಳನ್ನು ಪಕ್ಕದ ಸರ್ಕಾರಿ ಶಾಲೆಗೆ ಸೇರಿಸಲಾಗುತ್ತದೆ. ಆದರೆ ಸರ್ಕಾರಿ ಶಾಲೆಯನ್ನು ಬಿಟ್ಟು ಖಾಸಗಿ ಶಾಲೆಗೆ ಸೇರಿದ ಮಕ್ಕಳನ್ನು ಮರಳಿ ಕರೆತರುವುದು ಸುಲಭ ಸಾಧ್ಯವಲ್ಲ. ಮೂರು ವರ್ಷಗಳವರೆಗೆ ಶಾಲೆಗೆ ಮಕ್ಕಳ ದಾಖಲಾತಿ ಆಗದೆ ಹೋದರೆ ಆ ಶಾಲೆಯನ್ನು ಮುಚ್ಚಲಾಗುತ್ತದೆ.
ಪೈಪೋಟಿ ಮತ್ತು ವ್ಯಾಮೋಹ: ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಿ ಹಲವು ಸೌಲಭ್ಯಗಳನ್ನು ಕೊಟ್ಟರೂ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವುದಕ್ಕೆ ಖಾಸಗಿ ಶಾಲೆಗಳ ಪೈಪೋಟಿಯೇ ಕಾರಣ. ಅಲ್ಲದೆ, ಪಾಲಕರಿಗೆ ಖಾಸಗಿ ಶಾಲೆಗಳ ಮೇಲೆ ಇರುವ ವ್ಯಾಮೋಹವೂ ಪ್ರಮುಖ ಕಾರಣವಾಗಿದೆ. ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುವುದು ಭವಿಷ್ಯ, ಪ್ರತಿಷ್ಠೆಯೂ ಆಗಿ ಬದಲಾಗಿದೆ. ಇದರಿಂದಾಗಿ ಸರ್ಕಾರಿ ಶಾಲೆಗಳು ವ್ಯತಿರಿಕ್ತ ಪರಿಣಾಮವನ್ನು ಎದುರಿಸುತ್ತಿವೆ. 2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು-322, ಹಿರಿಯ ಪ್ರಾಥಮಿಕ ಶಾಲೆಗಳು-404, ಪ್ರೌಢಶಾಲೆಗಳು-86 ಇದ್ದವು. ಇಲ್ಲಿ ಒಟ್ಟು 59,339 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. 2024-25ನೇ ಸಾಲಿನಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ 403ಕ್ಕೆ ಇಳಿದಿದೆ. ಪ್ರೌಢಶಾಲೆ 86 ಇದೆ. ಇವುಗಳಲ್ಲಿ ಒಟ್ಟು 55,091 ವಿದ್ಯಾರ್ಥಿಗಳು ಇದ್ದಾರೆ.
ಕೆಲವು ಖಾಸಗಿ ಶಾಲೆಗಳಲ್ಲಿ ಪ್ರಾರಂಭದಲ್ಲಿ ಉಚಿತ ಪ್ರವೇಶ ನೀಡುತ್ತಿವೆ. ಹಳ್ಳಿ ಹಳ್ಳಿಗಳಿಗೆ ವಾಹನಗಳನ್ನು ಕಳುಹಿಸಿಕೊಡುತ್ತಿವೆ. ಮಧ್ಯಾಹ್ನದ ಬಿಸಿಯೂಟವನ್ನೂ ನೀಡುತ್ತಿವೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕೊರತೆ ಉಂಟಾಗುತ್ತಿದೆ. ತಾತ್ಕಾಲಿಕವಾಗಿ ಮುಚ್ಚಿದ ಉರ್ದು ಶಾಲೆಗಳಲ್ಲಿರುವ ಕಡೆ ಮುಸ್ಲಿಮರು ಊರು ತೊರೆದಿದ್ದಾರೆ. ಹೀಗಾಗಿ ಕಳೆದ ಸಲ 12 ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಿದವು. ಇದರಲ್ಲಿ 4 ಶಾಲೆಗಳು ಪುನರಾರಂಭವಾದವು. ಈ ಸಲ 12 ಶಾಲೆಗಳು ಮುಚ್ಚಿವೆ. ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯ, ಶಿಕ್ಷಕರ ವಿದ್ಯಾರ್ಹತೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಲಿತಾಂಶಗಳನ್ನು ಪಾಲಕರಿಗೆ ತಿಳಿಸಿ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡುವ ಆಂದೋಲನ ನಡೆಸುತ್ತಿದ್ದೇವೆ. ರಾಮಚಂದ್ರ ರಾಜೇಅರಸ್, ಉಪ ನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ, ಚಾಮರಾಜನಗರ