ಜಿಲ್ಲೆ

ಬಾಗಿನ ಅರ್ಪಿಸಲು ಪೈಪೋಟಿ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಹೋಬಳಿಯ ತೆಂಗಿನಕಲ್ಲು ಗ್ರಾಮದ ಕೆರೆ ತುಂಬಿಸುವ ಮೂಲಕ ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ ಸಿಕ್ಕಿದೆ. ಕೆರೆ ತುಂಬಿದ ಬೆನ್ನಲ್ಲೇ ಯೋಜನೆ ನಮ್ಮದು ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಪೈಪೋಟಿಗೆ ಬಿದ್ದಿವೆ. ಅಲ್ಲದೆ ಎರಡೂ ಪಕ್ಷಗಳ ಮುಖಂಡರು ಕೆರೆಗೆ ಬಾಗಿನ ಅರ್ಪಿಸಲು ಸದ್ದಿಲ್ಲದೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈ ಯೋಜನೆ ಮೂಲಕ 92 ಹಳ್ಳಿಗಳ ರೈತರಿಗೆ ಅನುಕೂಲವಾಗಲಿದೆ. ಅವ್ವೇರಹಳ್ಳಿ, ನೆಲೆಮಲೆ, ತೆಂಗಿನಕಲ್ಲು ಕೆರೆಗಳು ಯೋಜನೆಯಿಂದ ನೀರು ಕಾಣುವಂತಾಗಿದೆ. ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿಯ ಹಲವಾರು ಗ್ರಾಮಗಳು ಯೋಜನೆಯ ಲಾಭ ಪಡೆಯಲಿವೆ.

ಕೆರೆ ತುಂಬಿಸುವ ಯೋಜನೆಯಿಂದ ಅಂತರ್ಜಲ ಹೆಚ್ಚಿ ಕೊಳವೆ ಬಾವಿಗಳ ಮೂಲಕ ನೀರಾವರಿ ಬೆಳೆ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ. ಆದರೆ, ಯೋಜನೆಯ ಲಾಭ ಪಡೆಯಲು ಮುಂದಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಈಗ ಬಾಗಿನ ಅರ್ಪಿಸಲು ಪೈಪೋಟಿಗೆ ಬಿದ್ದಿವೆ. ಜನರು ಯಾರಿಗೆ ಜೈ ಅನ್ನುವರೋ ಕಾದು ನೋಡಬೇಕಿದೆ. ಈ ಬಗ್ಗೆ ಎರಡೂ ಪಕ್ಷಗಳು ಜಾಲತಾಣದಲ್ಲಿ ಸಂದೇಶಗಳನ್ನು ಹರಿಬಿಡುತ್ತಿವೆೆ.

29ರಂದು ಬಾಗಿನ ಅರ್ಪಣೆಗೆ ಸಿದ್ಧತೆ: ಈ ಮಧ್ಯೆ ತೆಂಗಿನಕಲ್ಲು ಕೆರೆ ತುಂಬಿರುವುದು ಕಾಂಗ್ರೆಸ್ ಪಾಳಯದಲ್ಲಿ ಹರ್ಷ ತಂದಿದ್ದು, ಡಿ.ಕೆ. ಶಿವಕುವಾರ್, ಡಿ.ಕೆ. ಸುರೇಶ್ ಇಬ್ಬರನ್ನು ಕರೆತಂದು ಜ.29ರಂದು ಕೆರೆಗೆ ಬಾಗಿನ ಅರ್ಪಿಸಲು ಸಿದ್ಧತೆ ನಡೆಸಿ ಯೋಜನೆಯ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ಈಗಾಗಲೇ ಪಕ್ಷದ ಸ್ಥಳೀಯ ಮುಖಂಡರು ತೆಂಗಿನಕಲ್ಲು ಗ್ರಾಮಕ್ಕೆ ತೆರಳಿ ಕೆರೆಗೆ ಬಾಗಿನ ಅರ್ಪಿಸುವ ಸವಾರಂಭದ ಪೂರ್ವ ಸಿದ್ಧತೆ ಬಗ್ಗೆ ಸ್ಥಳೀಯರ ಜತೆ ಭಾನುವಾರ ಚರ್ಚೆ ನಡೆಸಿದ್ದಾರೆ.

ದಿನಾಂಕದ ಸುಳಿವು ಬಿಡದ ಜೆಡಿಎಸ್: ಕಾಂಗ್ರೆಸ್ ತಯಾರಿ ನಡೆಸುತ್ತಿರುವಂತೆಯೇ ಜೆಡಿಎಸ್ ಮುಖಂಡರೂ ವಾಜಿ ಮುಖ್ಯಮಂತ್ರಿ ಎಚ್.ಡಿ. ಕುವಾರಸ್ವಾಮಿ, ಇಲ್ಲವೇ ಶಾಸಕಿ ಅನಿತಾ ಕುವಾರಸ್ವಾಮಿ ಮುಖಾಂತರ ಕೆರೆಗೆ ಬಾಗಿನ ಅರ್ಪಿಸಲು ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದಾರೆ. ಆದರೆ ಬಾಗಿನ ಅರ್ಪಿಸುವ ದಿನಾಂಕದ ಬಗ್ಗೆ ಸುಳಿವು ಬಿಟ್ಟುಕೊಡುತ್ತಿಲ್ಲ.

ಕೆರೆ ತುಂಬಿಸುವ ಯೋಜನೆ ಸಂಸದ ಡಿ.ಕೆ. ಸುರೇಶ್ ಅವರ ಕನಸಿನ ಕೂಸು. ಅವರ ಶ್ರಮದಿಂದ ಕೆರೆಗಳು ಯೋಜನೆ ಲಾಭ ಪಡೆದಿವೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುವಾರ್, ಸಂಸದ ಡಿ.ಕೆ. ಸುರೇಶ್ ತುಂಬಿದ ಕೆರೆಗೆ ಬಾಗಿನ ಅರ್ಪಿಸಲಿದ್ದಾರೆ. ನಾಗೇಶ್, ಗ್ರಾಪಂ ಸದಸ್ಯ, ಅವ್ವೇರಹಳ್ಳಿ, **** ಮಾಜಿ ಸಿಎಂ ಎಚ್.ಡಿ. ಕುವಾರಸ್ವಾಮಿ ಮತ್ತು ಶಾಸಕಿ ಅನಿತಾ ಕುವಾರಸ್ವಾಮಿ ಅವರ ವಿಶೇಷ ಕಾಳಜಿಯಿಂದ ಕೆರೆಗೆ ನೀರು ಹರಿದಿದೆ. ಕಾಂಗ್ರೆಸ್ ನಾಯಕರು ಯೋಜನೆ ನಮ್ಮದು ಎನ್ನುತ್ತಿದ್ದಾರೆ. ಇದರಲ್ಲಿ ಅವರ ಪಾತ್ರ ಏನೂ ಇಲ್ಲ, ಜನರ ಸಿಂಪತಿ ಗಿಟ್ಟಿಸಲು ಹೊರಟಿದ್ದಾರೆ. ಅದರಲ್ಲಿ ಅವರಿಗೆ ಯಶಸ್ಸು ಸಿಗುವುದಿಲ್ಲ. ಯೋಜನೆಯ ಎಲ್ಲ ಕ್ರೆಡಿಟ್ ಎಚ್‌ಡಿಕೆ ಮತ್ತು ಅನಿತಾ ಅವರಿಗೇ ಸಲ್ಲುತ್ತದೆ. ಶಿವಲಿಂಗಯ್ಯ, ಜೆಡಿಎಸ್ ಮುಖಂಡ, ಅವ್ವೇರಹಳ್ಳಿ,

ಏನಿದು ಯೋಜನೆ?

ಕಾವೇರಿ ನೀರಾವರಿ ನಿಗಮದ ವತಿಯಿಂದ 2015-16ನೇ ಸಾಲಿನಲ್ಲಿ 145 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಭಾಗದ 27 ಕೆರೆ ತುಂಬಿಸುವ ಯೋಜನೆ ಸತತ 6 ವರ್ಷಗಳ ನಂತರ ಕಾರ್ಯರೂಪಕ್ಕೆ ಬಂದಿದೆ. ಮಳವಳ್ಳಿ ತಾಲೂಕಿನ ಶಿಂಷಾ ನದಿಯಿಂದ 82.85 ಕ್ಯೂಸೆಕ್ಸ್ ನೀರು ಹರಿದು ಬಂದಿದೆ. ಶಿಂಷಾ ನದಿ ತಟದ ಮಳವಳ್ಳಿ ತಾಲೂಕಿನ ಅಂಕನಹಳ್ಳಿ ಗ್ರಾಮದ ಬಳಿಯಿಂದ ಪ್ರಥಮ ಹಂತದ ಏತ ನೀರಾವರಿ ಮೂಲಕ ಕನಕಪುರ ತಾಲೂಕಿನ ಕಂಚನಹಳ್ಳಿ ಪಂಪ್‌ಹೌಸ್‌ಗೆ ನೀರು ತುಂಬಿಸಿ ಅಲ್ಲಿಂದ ಕಬ್ಬಾಳು ಕೆರೆ ಪಂಪ್‌ಹೌಸ್‌ನಲ್ಲಿ ನೀರು ಸಂಗ್ರಹಿಸಿ ಕನಕಪುರ ತಾಲೂಕಿನ 24 ಕೆರೆಗಳು, ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿ, ನೆಲೆಮಲೆ, ತೆಂಗಿನಕಲ್ಲು ಕೆರೆಗಳು ಸೇರಿ ಒಟ್ಟು 27 ಕೆರೆಗಳಿಗೆ ನೀರು ಹರಿಯುವ ಯೋಜನೆ ಇದಾಗಿದೆ.