ಜಿಲ್ಲೆ

ಬ್ರಿಟಿಷರಿಗೆ ಅಂಜಿಲ್ಲ, ಬಿಜೆಪಿಗೆ ಹೆದರಲ್ಲ

ಬಾಗಲಕೋಟೆ : ರಾಷ್ಟ್ರೀಯ ತನಿಖಾ ಸಂಸ್ಥೆಗಳ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಮೂಲಕ ರಾಷ್ಟಧಿಪತಿಗೆ ಮನವಿ ಸಲ್ಲಿಸಿದರು.

ಬಿಜೆಪಿಗೆ ಹೆದರಲ್ಲ: ಶಾಸಕ ಶಿವಾನಂದ ಪಾಟೀಲ ಮಾತನಾಡಿ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ೨೦೧೪ರ ಚುನಾವಣೆಯಲ್ಲಿ ಬಿಜೆಪಿ ಮೇಲೆ ಇದ್ದ ನಿರೀಕ್ಷೆ ಹುಸಿಯಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ಆಡಳಿತ ಜನಸಾಮಾನ್ಯರ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ. ರೈತರ ಬೇಡಿಕೆ ಈಡೇರಿಸುತ್ತಿಲ್ಲ. ಜಿಎಸ್‌ಟಿ ತೆರಿಗೆ ಪದ್ಧತಿಯಂತೂ ಗಬ್ಬರ್‌ಸಿಂಗ್ ಪರಾಕ್ರಮವನ್ನೂ ಮೀರಿಸುತ್ತಿದೆ. ಉಪ್ಪಿನ ಮೇಲೆ ತೆರಿಗೆ ಹಾಕಿದ್ದಕ್ಕೆ ಮಹಾತ್ಮ ಗಾಂಽ ನೇತೃತ್ವದಲ್ಲಿ ಹೋರಾಟ ಮಾಡಿ ಬ್ರಿಟಿಷರಿಗೆ ಬಿಸಿ ಮುಟ್ಟಿಸಿದ ದೇಶ ನಮ್ಮದು. ಇನ್ನು ಬಿಜೆಪಿಗೆ ಹೆದರುವ ಮಾತೇ ಇಲ್ಲ ಎಂದರು.

ಇ.ಡಿ. ಮೂಲಕ ಬೆದರಿಕೆ: ಇ.ಡಿ. ಮೂಲಕ ಕಾಂಗ್ರೆಸ್ ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ. ದೇಶದಿಂದ ಕಾಂಗ್ರೆಸ್ ಕಿತ್ತೊಗೆಯಲು ಅವರಿಗೆ ಸಾಧ್ಯವಿಲ್ಲ. ಏಕ ಪಕ್ಷೀಯ ಚಕ್ರಾಧಿಪತ್ಯ ಒಪ್ಪಲು ದೇಶದ ಜನ ಸಿದ್ಧರಿಲ್ಲ. ಮಾಜಿ ಪ್ರಧಾನಿ ದಿ.ಅಟಲï ಬಿಹಾರಿ ವಾಜಪೇಯಿ ಉತ್ತಮ ಆಡಳಿತಗಾರ. ಆದರೆ, ಮೋದಿ, ಶಾ ಜನರ ರಕ್ತ ಹಿಂಡುತ್ತಿದ್ದಾರೆ. ಅವರದೇ ಪಕ್ಷದ ಸಂಸದ ವರುಣ ಗಾಂಧಿ ನಿರುದ್ಯೋಗದ ವಿರುದ್ಧ ಧ್ವನಿ ಎತ್ತಿದ್ದರು. ಅಗ್ನಿಪಥ ವಿರೋಧಿಸಿ ಯುವಕರು ರೊಚ್ಚಿಗೆದ್ದಿದ್ದಾರೆ. ಮೋದಿ, ಶಾ ಗೆ ೨೦೨೪ರಲ್ಲಿ ದೇಶದ ಯುವಕರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಗುಡುಗಿದರು.

ಪ್ರಜಾಪ್ರಭುತ್ವದ ಕಗ್ಗೊಲೆ: ಮಾಜಿ ಶಾಸಕ ಜಿ.ಟಿ. ಪಾಟೀಲ ಮಾತನಾಡಿ, ದೇಶದಲ್ಲಿ ಅಘೋಷಿತ ತುರ್ತ ಪರಿಸ್ಥಿತಿ ಇದೆ. ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಇ.ಡಿ. ದಾಳಿ ಮೂಲಕ ಬೆದರಿಸುವ ತಂತ್ರಗಾರಿಕೆ ಅನುಸರಿಸಲಾಗುತ್ತಿದೆ. ಹಾಲು, ಮೊಸರಿನ ಮೇಲೂ ಜಿಎಸ್‌ಟಿ ಹಾಕುತ್ತಿರುವ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ದೇಶದಲ್ಲಿರುವ ಬಡತನ ನಿರ್ಮೂಲನೆ ಮಾಡುತ್ತಿಲ್ಲ. ಪ್ರಧಾನಿ ಮೋದಿ ಯಾವುದೇ ಭರವಸೆ ಈಡೇರಿಸಿಲ್ಲ. ಧರ್ಮದ ಹೆಸರಿನಲ್ಲಿ ದೇಶದ ಜನರ ಮನಸ್ಸು ಒಡೆಯುತ್ತಿದ್ದಾರೆ. ಕಾಂಗ್ರೆಸ್ ವರಿಷ್ಠರನ್ನು ಬೆದರಿಸುವ ನಿಮ್ಮ ಯತ್ನ ಸಫಲವಾಗದು. ಕಾಂಗ್ರೆಸ್‌ಗೆ ಸಾವಿಲ್ಲ. ಆದರೆ, ಮಹಾತ್ಮ ಗಾಂಧೀಜಿ ಕೊಂದವರನ್ನು ಪೂಜಿಸುವ ನಿಮ್ಮ ದುರಾಡಳಿತವನ್ನು ಜನರೇ ಅಂತ್ಯ ಗೊಳಿಸಲಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮುಖಂಡರಾದ ಮಲ್ಲಿಕಾರ್ಜುನ ನಾಗಪ್ಪ, ನಾಗರಾಜ ಹದ್ಲಿ, ನಿಂಗನಗೌಡ ಪಾಟೀಲ, ಉಮೇಶ ಮೇಟಿ, ಪೀರಪ್ಪ ಮ್ಯಾಗೇರಿ, ರಾಜು ಮನ್ನಿಕೇರಿ, ಮುತ್ತು ಜೋಳದ, ಚನ್ನವೀರ ಅಂಗಡಿ ಇತರರು ಇದ್ದರು.

  • ಸೋನಿಯಾ ಗಾಂಧಿ ಅವರ ವಿರುದ್ಧ ಇ.ಡಿ. ಮೂಲಕ ತನಿಖೆ ನಡೆಸುತ್ತಿರುವ ಕೇಂದ್ರದ ನಿರ್ಧಾರ ಖಂಡನೀಯ. ಬೆಲೆ ಏರಿಕೆ ಕ್ರಮದಿಂದ ಜನ ಬೇಸತ್ತಿದ್ದಾರೆ. ಅದರ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡಬಾರದೆಂಬ ಕಾರಣಕ್ಕೆ ತನಿಖಾ ಸಂಸ್ಥೆಗಳ ಮೂಲಕ ದಾಳಿ, ವಿಚಾರಣೆ ನೆಪದಲ್ಲಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
    | ರಕ್ಷಿತಾ ಭರತಕುಮಾರ ಈಟಿ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ

  • ಬಿಜೆಪಿ ಸರ್ಕಾರ ಕಾಂಗ್ರೆಸ್‌ನ ಪ್ರಮುಖ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದೆ. ವಿಚಾರಣೆ ನೆಪದಲ್ಲಿ ಹಿಂಸೆ ನೀಡುತ್ತಿದ್ದಾರೆ. ಗಾಂಧಿ ಕುಟುಂಬದ ಬಗ್ಗೆ ದೇಶದಲ್ಲಿ ಗೌರವ ಇದೆ. ಅದಕ್ಕೆ ಧಕ್ಕೆ ತರಲು ಬಿಜೆಪಿ ಹುನ್ನಾರ ನಡೆಸಿದೆ. ಸ್ವೀಸ್ ಬ್ಯಾಂಕ್‌ನಿಂದ ಹಣ ತರುತ್ತೇವೆ ಎಂದವರು ನಯಾಪೈಸೆಯನ್ನೂ ತಂದಿಲ್ಲ. ವೈಯಕ್ತಿಕ ಜಗಳಕ್ಕೆ ಹಿಂದು-ಮುಸ್ಲಿಂ, ಬಿಜೆಪಿ-ಕಾಂಗ್ರೆಸ್ ಎಂದು ಬಣ್ಣ ಹಚ್ಚಿ ಕೋಲಾಹಲ ಎಬ್ಬಿಸುತ್ತಾರೆ. ಕೂಡಲೇ ಇ.ಡಿ. ತನಿಖೆ ಕೈಬಿಡಬೇಕು.
    | ಎಚ್.ವೈ. ಮೇಟಿ, ಮಾಜಿ ಸಚಿವ

  • ಕಾಂಗ್ರೆಸ್ ಬ್ರಿಟಿಷರಿಗೇ ಹೆದರಿಲ್ಲ. ನ್ಯಾಷನಲï ಹೆರಾಲ್ಡ್ ಪತ್ರಿಕೆ ಅಂದು ಬ್ರಿಟಿಷರಿಗೆ ಸೆಡ್ಡು ಹೊಡೆದಿತ್ತು. ಎಂದಿಗೂ ಈ ಪತ್ರಿಕೆ ಅಪಚಾರ ಮಾಡಿಲ್ಲ. ಹಣದಲ್ಲಿ ದುರಪಯೋಗವಾಗಿಲ್ಲ. ಮನೆ, ಜಮೀನು ಖರೀದಿ ಮಾಡಿಲ್ಲ. ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಆರ್ಥಿಕ ಸಹಾಯ ಮಾಡಲಾಗಿದೆ. ಅದನ್ನು ಹಗರಣ ಎನ್ನುವುದು ಯಾವ ನ್ಯಾಯ? ಪ್ರಧಾನಿ ನರೇಂದ್ರ ಮೋದಿ ಮಾತೇ ಆಡುವುದಿಲ್ಲ. ಆದರೆ, ಮಾಡೋದೆಲ್ಲ ಅಪಚಾರ. ಅವರು ಹೇಳಿದ್ದ ಅಚ್ಛೇದಿನ ಬರಲೇ ಇಲ್ಲ. ಜಿಎಸ್‌ಟಿ ಮೂಲಕ ಹಣ ದೋಚಲಾಗುತ್ತಿದೆ. ಇದನ್ನು ವಿರೋಽಸದಿದ್ದರೆ ದೇಶ ಅಧೋಗತಿಗೆ ಇಳಿಯಲಿದೆ.
    | ಎಸ್.ಜಿ. ನಂಜನಯ್ಯನಮಠ, ಕಾಂಗ್ರೆಸ್ ಜಿಲ್ಲಾಧ್ಯಕ್ಷ