ಬಾಗಲಕೋಟೆ ನಗರದ ವಿದ್ಯಾಗಿರಿ ಇಂಜಿನಿಯರಿಂಗ್ ಸರ್ಕಲ್‌ನಲ್ಲಿ ಮಂಗಳವಾರ ಜಲ ಸಂಪನ್ಮೂಲ ಇಲಾಖೆ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿದರು. 
ಜಿಲ್ಲೆ

ಬಾಗಲಕೋಟೆ ಮಾದರಿ ನಗರವನ್ನಾಗಿಸಲು ಸಹಕರಿಸಿ

ಬಾಗಲಕೋಟೆ: ಬಾಗಲಕೋಟೆ ನಗರವನ್ನು ಮಾದರಿ ನಗರವನ್ನಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ವಿದ್ಯಾಗಿರಿ ಇಂಜಿನಿಯರಿಂಗ್ ಸರ್ಕಲ್‌ನಲ್ಲಿ ಮಂಗಳವಾರ ಜಲ ಸಂಪನ್ಮೂಲ ಇಲಾಖೆ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನವನಗರದ ಇಂಜಿನಿಯರಿಂಗ್ ಕಾಲೇಜ ಸರ್ಕಲ್‌ನಿಂದ ಎನ್‌ಎಚ್೩೬೭ ರವರೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಾಳಿದಾಸ ಸರ್ಕಲ್‌ನಿಂದ ಬೆಳಗಾವಿ ಹೆದ್ದಾರಿ ವರೆಗೆ ೫.೬೫ ಕೋಟಿ ರೂ.ಗಳ ವೆಚ್ಚದಲ್ಲಿ ಚತುಷ್ಪತ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲಿನ ರಸ್ತೆಯನ್ನು ಮಾರ್ಪಾಡು ಮಾಡಿ ರಸ್ತೆಯ ಎರಡು ಬದಿಯಲ್ಲಿ ಚರಂಡಿ ಮತ್ತು ಡಕ್ಟ್ ನಿರ್ಮಾಣ ಮಾಡಲಾಗುತ್ತಿದೆ. ಇಂಜಿನಿಯರಿಂಗ್ ಕಾಲೇಜ ವೃತ್ತದಲ್ಲಿ ಬಸ್ ಸೆಲ್ಟರ್ ಮತ್ತು ಸುಲಭ ಶೌಚಗೃಹ ನಿರ್ಮಿಸಲಾಗುತ್ತಿದೆ ಎಂದರು.
ನವನಗರದ ದಕ್ಷಿಣ ಭಾಗದಲ್ಲಿರುವ ಆಶ್ರಯ ಕಾಲೋನಿಯಲ್ಲಿ ೪.೮೦ ಕೋಟಿ ರೂ.ಗಳ ವೆಚ್ಚದ ಉದ್ಯಾನವನ ಅಭಿವೃದ್ಧಿ ಹಾಗೂ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಸಹ ನೆರವೇರಿಸಲಾಗಿದೆ. ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಽಕಾರಿಗಳು ಕ್ರಮವಹಿಸಲಿದ್ದಾರೆ. ಒಟ್ಟು ೧೧ ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲಾಗಿದೆ. ಸಾರ್ವಜನಿಕರು ಪುಟ್‌ಪಾತ್ ಮೇಲೆ ಹಾಕಿರುವ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು ಎಂದು ಹೇಳಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ಹೊಸದಾಗಿ ಒಟ್ಟು ೮೨ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅನುಮೋದನೆಗೊಂಡಿದ್ದು, ಈ ಪೈಕಿ ೫೭ ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನು ೨೫ ಕಾಮಗಾರಿಗಳಿಗೆ ಅನುಮೋದನೆ ಕಳುಹಿಸಲಾಗಿದೆ. ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಬಾಗಲಕೋಟೆ ನಗರವನ್ನು ಮಾದರಿ ನಗರವನ್ನಾಗಿಸಲು ಪ್ರಯತ್ನಿಸಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಸಹ ಅಗತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಶಿವಾನಂದ ಟವಳಿ, ಕುಮಾರ ಎಳ್ಳಿಗುತ್ತಿ, ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ನಗರಸಭೆ ಸಭಾಪತಿ ಅಂಬಾಜಿ ಜೋಶಿ, ಸದಸ್ಯರಾದ ಈರಣ್ಣ ತಿರಕಣ್ಣವರ, ಶೋಭಾ ರಾವ್, ಬಿಟಿಡಿಎ ಮಾಜಿ ಅಧ್ಯಕ್ಷ ಜೆ.ಎನ್.ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.