ಜಿಲ್ಲೆ

ಬಾಗಲಕೋಟೆಯಲ್ಲಿ ಹಳೇ ಹುಲಿಗಳದ್ದೇ ಹವಾ..

ರಾಜ್ಯ ರಾಜಕಾರಣದಲ್ಲಿ ಬಾಗಲಕೋಟೆ ಅಧಿಕಾರ ಶಕ್ತಿ ಕೇಂದ್ರದ ಜಿಲ್ಲೆಗಳಲ್ಲೊಂದು. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಸಚಿವ ಸ್ಥಾನ ಫಿಕ್ಸ್. ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ಹೆಗ್ಗಳಿಕೆ ಜಿಲ್ಲೆಯದ್ದು. ಮುಖ್ಯಮಂತ್ರಿಗಳಾಗಿದ್ದ ಮೂವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಕೀರ್ತಿಯೂ ಜಿಲ್ಲೆಗೆ ಸಲ್ಲಲಿದೆ. ಕಾಂಗ್ರೆಸ್ ಭದ್ರಕೋಟೆಯನ್ನು ಮೊದಲು ಛಿದ್ರ ಮಾಡಿದ್ದು ಜನತಾದಳ. 2004ರಲ್ಲಿ ಆದ ರಾಜಕೀಯ ಧ್ರುವೀಕರಣದಲ್ಲಿ ಕಾಂಗ್ರೆಸ್​ಗೆ ನಡುಕ ಹುಟ್ಟಿಸಿ ಬಾಹುಬಲ ಮೆರೆದಿದ್ದು ಬಿಜೆಪಿ. ಇದೀಗ ಕೋಟೆಯ ರಾಜಕೀಯ ರಣರಂಗದಲ್ಲಿ ಕೈ-ಕಮಲ ಪಕ್ಷಗಳದ್ದೆ ಜಿದ್ದಾಜಿದ್ದಿ. ಊಟದಲ್ಲಿ ಉಪ್ಪಿನಕಾಯಿಯಂತೆ ಜೆಡಿಎಸ್ ಹಾಗೂ ಇತರರ ಆರ್ಭಟ! ಅಖಾಡದಲ್ಲಿ ಪರಸ್ಪರ ಎದುರಾಳಿ ಆಗುವುದು ಬಹುತೇಕ ಅದೇ ಹಳೇ ಹುಲಿಗಳು. ಸತತ ನಾಲ್ಕು ವರ್ಷಗಳಿಂದ ಮೂರು ನದಿಗಳ ಪ್ರವಾಹ ಸಂಕಷ್ಟದಲ್ಲಿ ಬೆಂದಿರುವ ಜಿಲ್ಲೆಯ ಸಂತ್ರಸ್ತರು ಯಾರನ್ನು ಮುಳುಗಿಸುತ್ತಾರೆ, ಇನ್ನ್ಯಾರನ್ನು ತೇಲಿಸುತ್ತಾರೆ ಎನ್ನುವುದು ಸದ್ಯಕ್ಕೆ ನಿಗೂಢ. ಏಳು ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಸದ್ಯ ಐದು ಕ್ಷೇತ್ರಗಳಲ್ಲಿ ಬಿಜೆಪಿ, ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇದ್ದಾರೆ. ಮುಧೋಳ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರ. ಲಿಂಗಾಯತ ಬಾಹುಳ್ಯ ಇರುವ ಜಿಲ್ಲೆ ಇದಾಗಿದ್ದು, ಅಹಿಂದ ಮತದಾರರು ಫಲಿತಾಂಶವನ್ನು ಎತ್ತಬೇಕಾದರೂ ತಿರುಗಿಸುವ ತಾಕತ್ತು ಹೊಂದಿದ್ದಾರೆ.

| ಅಶೋಕ ಶೆಟ್ಟರ ಬಾಗಲಕೋಟೆ

ಬಾದಾಮಿಯಲ್ಲಿ ಉಳಿವರೇ ಸಿದ್ದರಾಮಯ್ಯ?

2018ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎಂಟ್ರಿಯಿಂದ ಬಾದಾಮಿ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಪ್ರಯಾಸಪಟ್ಟು ಗೆದ್ದ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಸ್ಥಾನ ಪಡೆದರು. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದಿದ್ದು ಸಿದ್ದರಾಮಯ್ಯ ವರ್ಚಸ್ಸಿಗೆ ಸಾಕ್ಷಿ. 2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತೆ ಇಲ್ಲಿಂದ ಸ್ಪರ್ಧಿಸುತ್ತ್ತಾರಾ? ಎನ್ನುವುದು ನಿಗೂಢ. ಅವರೇ ಇಲ್ಲಿ ಸ್ಪರ್ಧಿಸಲಿ ಎನ್ನುವುದು ಅಭಿಮಾನಿಗಳ ಒತ್ತಾಸೆ. ಅವರು ಸ್ಪರ್ಧಿಸದಿದ್ದರೆ ಕಾಂಗ್ರೆಸ್​ನಲ್ಲಿ ಟಿಕೆಟ್ ಕದನ ಮುಗಿಲುಮುಟ್ಟಲಿದೆ. ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ, ಸಿದ್ದು ಆಪ್ತ ಹೊಳೆಬಸು ಶೆಟ್ಟರ, ಎಸ್.ಡಿ. ಜೋಗಿನ, ಮಹೇಶ್ ಹೊಸಗೌಡರ ಸೇರಿ ಅರ್ಧ ಡಜನ್​ಗೂ ಅಧಿಕ ಆಕಾಂಕ್ಷಿಗಳಿದ್ದಾರೆ. ಬಿಜೆಪಿಯಲ್ಲಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹಾಗೂ ಮಹಾಂತೇಶ ಮಮದಾಪುರ ಸ್ಪರ್ಧಾಕಾಂಕ್ಷಿಗಳು. ಅವಕಾಶ ಸಿಗಬಹುದೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಕೂಡ ಸಿದ್ಧತೆ ಮಾಡಿಕೊಂಡಿದ್ದಾರೆ. ಜೆಡಿಎಸ್​ನಿಂದ ಹನಮಂತ ಮಾವಿನಮರದ ಸ್ಪರ್ಧೆ ಖಚಿತ.

ಚರಂತಿಮಠ ವಿರುದ್ಧ ಬಿಜೆಪಿಗರದ್ದೇ ಸದ್ದು

ಬಿಜೆಪಿ ಭದ್ರಕೋಟೆಯಾಗಿರುವ ಬಾಗಲಕೋಟೆ ಕ್ಷೇತ್ರದಲ್ಲಿ ವೀರಣ್ಣ ಚರಂತಿಮಠ ಮೂರು ಬಾರಿ ಗೆದ್ದಿದ್ದಾರೆ. ಈ ಸಲವೂ ಅವರು ಪ್ರಬಲ ಆಕಾಂಕ್ಷಿ. ಆದರೆ, ಚರಂತಿಮಠ ವಿರುದ್ಧ ವಿಪಕ್ಷಗಳಿಗಿಂತ ಅವರದ್ದೇ ಪಕ್ಷದ ಕೆಲವರು ಸಿಡಿದು ನಿಂತಿದ್ದಾರೆ. ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಟಿಕೆಟ್ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ. ಮತ್ತಷ್ಟು ಜನ ಟಿಕೆಟ್​ಗಾಗಿ ಸರದಿ ಸಾಲಿನಲ್ಲಿದ್ದಾರೆ. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಆಪ್ತ, ಮಾಜಿ ಸಚಿವ ಎಚ್.ವೈ. ಮೇಟಿ ಪ್ರಬಲ ಆಕಾಂಕ್ಷಿ. ಬಾದಾಮಿ ಕ್ಷೇತ್ರದಲ್ಲಿ ಎರಡು ಸಲ ಟಿಕೆಟ್ ಘೊಷಣೆ ಆಗಿ ಬಿ ಫಾಮ್ರ್ ಸಿಗದೇ ವಂಚಿತವಾಗಿರುವ ಡಾ. ದೇವರಾಜ ಪಾಟೀಲ ಈ ಸಲ ಬಾಗಲಕೋಟೆ ಕ್ಷೇತ್ರಕ್ಕೆ ಟಿಕೆಟ್ ಕೊಡಿ ಎನ್ನುತ್ತಿದ್ದಾರೆ. ಮಹಿಳಾ ಕೋಟಾದಲ್ಲಿ ನನಗೆ ಟಿಕೆಟ್ ಕೊಡಿ ಎಂದು ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ ಕೇಳುತ್ತಿದ್ದಾರೆ. ಜಿ.ಪಂ. ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ನಾಗರಾಜ ಹದ್ಲಿ ಕೂಡ ಆಕಾಂಕ್ಷಿಗಳು. ನಗರ ಪ್ರದೇಶದಲ್ಲಿ ಬಿಜೆಪಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಬಲವಾಗಿದೆ. ಜೆಡಿಎಸ್​ಗೆ ಅಭ್ಯರ್ಥಿಗಳು ಪಕ್ಕಾ ಇಲ್ಲ.

ಜಯದ ಜಾಮೂನು ಯಾರಿಗೆ?

ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇರುವ ಮತ್ತೊಂದು ಕ್ಷೇತ್ರ ಜಮಖಂಡಿ. ಸಿದ್ದು ನ್ಯಾಮಗೌಡ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಪುತ್ರ ಆನಂದ ನ್ಯಾಮಗೌಡ ಸ್ಪರ್ಧಿಸಿ ಗೆಲುವು ಕಂಡಿದ್ದರು. ಈ ಸಲವೂ ಅವರೇ ಅಭ್ಯರ್ಥಿ. ತಮಗೊಂದು ಅವಕಾಶ ಕೊಡಿ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಅರ್ಜಿ ಹಾಕಿದರೆ ಅಚ್ಚರಿಯಿಲ್ಲ. ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಕಷ್ಟವಲ್ಲ. ಆದರೆ ಅಭ್ಯರ್ಥಿ ಆಯ್ಕೆಯೇ ಎಡವಟ್ಟು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಎಷ್ಟೇ ಸಲ ಸೋತರೂ ಜಮಖಂಡಿ ಟಿಕೆಟ್ ಅವರಿಗೇ ಸಿಗುತ್ತಿದೆ. ರೈತ ಮುಖಂಡ ಬಸವರಾಜ ಸಿಂಧೂರ ಬಿಜೆಪಿಯಲ್ಲಿ ತಮಗೆ ಅವಕಾಶ ಕೊಡುತ್ತಾರಾ? ಎಂದು ಕಾಯುತ್ತಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕ ಜಗದೀಶ ಗುಡಗುಂಟಿ ಕೂಡ ಪ್ರಬಲ ಆಕಾಂಕ್ಷಿ. ದಳಪತಿಗಳು ಇನ್ನು ಅಭ್ಯರ್ಥಿ ಹುಡುಕಬೇಕು.

ಬೀಳಗಿಯಲ್ಲಿ ನಿರಾಣಿ ಬಾಸ್!

ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಬೀಳಗಿ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದಿದ್ದಾರೆ. ಒಂದು ಸಲ ಸೋತಿದ್ದಾರೆ. ಬಿಜೆಪಿಯಲ್ಲಿ ಮತ್ತೆ ಅವರಿಗೇ ಟಿಕೆಟ್ ಫಿಕ್ಸ್. ಕಾಂಗ್ರೆಸ್​ನಲ್ಲಿ ಮಾಜಿ ಶಾಸಕ ಜೆ.ಟಿ. ಪಾಟೀಲ ಆಕಾಂಕ್ಷಿ. ಆದರೆ, ಕಳೆದ ಸಲ ಜೆ.ಟಿ.ಪಾಟೀಲರು ಮುಂದಿನ ಸಲ ಬೇರೆಯವರು ಸ್ಪರ್ಧಿಸಲಿ ಎಂದಿದ್ದರೆಂದು ಅವರ ಪಕ್ಷದ ಕೆಲವರು ಹೇಳುತ್ತಿದ್ದಾರೆ. ಎಸ್.ಆರ್. ಪಾಟೀಲ ಸಂಬಂಧಿ ಎಂ.ಎನ್. ಪಾಟೀಲ, ಜಿಪಂ ಮಾಜಿ ಸದಸ್ಯ ಬಸವರಾಜ್ ಖೋತ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು. ಜತೆಗೆ ಬೀಳಗಿ ಕ್ಷೇತ್ರದಲ್ಲಿ ಎರಡು ಸಲ ಜೆಡಿಎಸ್​ನಿಂದ ಸ್ಪರ್ಧೆ ಮಾಡಿ ಸೋತು, 2018ರ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಂದಿರುವ ಬಸವಪ್ರಭು ಸರನಾಡಗೌಡ ಪ್ರಬಲ ಆಕಾಂಕ್ಷಿ. ಅವರಿಗೆ ಅವಕಾಶ ಕೊಡುವ ಅಭಯ ನೀಡಿಯೇ ಪಕ್ಷಕ್ಕೆ ಕರೆತಂದಿದ್ದರು. ಹೀಗಾಗಿ ಈ ಸಲ ತಮಗೆ ಅವಕಾಶ ಕೊಡಿ ಎಂದು ಹಕ್ಕೊತ್ತಾಯ ಮಾಡುವ ಸಾಧ್ಯತೆ ಇದೆ. ಇಲ್ಲೂ ಜೆಡಿಎಸ್​ಗೆ ಅಭ್ಯರ್ಥಿ ಹುಡುಕಬೇಕು.

ತೇರದಾಳದಲ್ಲಿ ಅಭ್ಯರ್ಥಿಗಳದ್ದೇ ತಳಮಳ

2008ರಲ್ಲಿ ಉದಯವಾದ ತೇರದಾಳ ಕ್ಷೇತ್ರ ಮೂರು ಚುನಾವಣೆ ಕಂಡಿದೆ. ಎರಡು ಸಲ ಸಿದ್ದು ಸವದಿ, ಒಂದು ಸಲ ಉಮಾಶ್ರೀ ಗೆಲುವು ಕಂಡಿದ್ದಾರೆ. ಮೂರು ಚುನಾವಣೆಗಳಲ್ಲೂ ಇಬ್ಬರೇ ಎದುರಾಳಿಗಳು. 2004ರಲ್ಲಿ ಸಿದ್ದು ಸವದಿ ಜಮಖಂಡಿ ಕ್ಷೇತ್ರದಿಂದ ಮೊದಲ ಸಲ ಶಾಸಕರಾಗಿದ್ದರು. ಈಗ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಕಾರಣ ಶಾಸಕರಾದ ಬಳಿಕ ನಿಗಮ ಮಂಡಳಿಯನ್ನು ತಾವೇ ಪಡೆದರು. ಇದು ಅವರ ವಿರುದ್ಧ ಒಳಗಿಂದೊಳಗೆ ಅಸಮಾಧಾನದ ಕಿಡಿ ಹೊತ್ತಿಕೊಂಡಿದೆ. ಭೀಮಸಿ ಮುಗದುಮ್ ಬಸವರಾಜ ಬಾಳೇಕಾಯಿ ಟಿಕೆಟ್ ಆಕಾಂಕ್ಷಿಗಳು. ಇನ್ನು ಕಾಂಗ್ರೆಸ್​ನ ಟಿಕೆಟ್ ಆಕಾಂಕ್ಷಿಗಳು ಉಮಾಶ್ರೀ ಹೊರಗಿನವರು ಎಂದು ಸದ್ದು ಮಾಡತೊಡಗಿದ್ದಾರೆ. ಕಾಂಗ್ರೆಸ್ ಮುಖಂಡ ರಾದ ವೈದ್ಯ ಪದ್ಮಜೀತ್ ನಾಡಗೌಡ ಪಾಟೀಲ, ರಿಯಲ್ ಎಸ್ಟೆಟ್ ಉದ್ಯಮಿ ಸಿದ್ದು ಕೊಣ್ಣೂರ, ವೈದ್ಯ ಡಾ. ಎ.ಆರ್. ಬೆಳಗಲಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ್ ಕಡ್ಲಿಮಟ್ಟಿ ಆಕಾಂಕ್ಷಿಗಳು.

ಮುಧೋಳದ ಗೆಲ್ಲುವ ಕುದುರೆ ಕಾರಜೋಳ

ಜಿಲ್ಲೆಯ ಏಕೈಕ ಎಸ್ಸಿ ಕ್ಷೇತ್ರ ಮುಧೋಳ. ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಈ ಕ್ಷೇತ್ರದ ಶಾಸಕರು. ಜನತಾದಳದಿಂದ 2004ರಲ್ಲಿ ಬಿಜೆಪಿಗೆ ಬಂದು ಗೆಲುವು ಸಾಧಿಸಿದ ಬಳಿಕ ಹಿಂತಿರುಗಿ ನೋಡಿಲ್ಲ. ಪ್ರತಿ ಚುನಾವಣೆಯಲ್ಲೂ ವಿಜಯಮಾಲೆ ಅವರ ಕೊರಳಿಗೆ. ಐದು ಸಲ ಶಾಸಕರಾಗಿರುವ ಅವರೇ 2023ರ ಚುನಾವಣೆಗೂ ಅಭ್ಯರ್ಥಿ. ಆದರೆ, ವಯಸ್ಸು ಅಡ್ಡಿ ಆಗುತ್ತಾ? ಹೀಗೊಂದು ಸಂಶಯ ಇದ್ದೆ ಇದೆ. ಅವರ ಪುತ್ರ ಅರುಣ ಕಾರಜೋಳ ಹೆಸರು ಕೇಳಿ ಬರುತ್ತಿದೆ. ಕಾಂಗ್ರೆಸ್​ನಲ್ಲಿ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಕಳೆದ ಸಲ ಸೋಲು ಅನುಭವಿಸಿರುವ ಸತೀಶ ಬಂಡಿವಡ್ಡರ ಮಧ್ಯೆ ಟಿಕೆಟ್​ಗಾಗಿ ಫೈಟ್ ನಡೆದಿದೆ. ಟಿಕೆಟ್ ಯಾರಿಗೆ ಸಿಕ್ಕರೂ ಪಕ್ಷ ಗೆಲ್ಲಲಿ ಎನ್ನುವ ಉದಾರತೆ ತೋರಿದರೆ ಕಾಂಗ್ರೆಸ್ ಗೆಲುವು ಕಷ್ಟವೇನಲ್ಲ. ಜೆಡಿಎಸ್​ನಿಂದ ಯಾರು? ಎಂಬುದೇ ಪಕ್ಕಾ ಇಲ್ಲ.

ಹುನಗುಂದದಲ್ಲಿ ತ್ರಿಕೋನ ಕದನ

ಬಿಜೆಪಿಯ ದೊಡ್ಡನಗೌಡ ಪಾಟೀಲ ಮೂರು ಸಲ ಶಾಸಕರಾಗಿದ್ದಾರೆ. ಆದರೆ, 2004 ಮತ್ತು 2008ರಲ್ಲಿ ಪಾಟೀಲರ ಬಗ್ಗೆ ಕಾರ್ಯಕರ್ತರಲ್ಲಿ ಇದ್ದ ಅಭಿಪ್ರಾಯಕ್ಕೂ ಈಗಿನ ಸ್ಥಿತಿಗೂ ಬಹಳ ವ್ಯತ್ಯಾಸ ಇದೆ. ಮುಂದಿನ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ಬಹುತೇಕ ಫಿಕ್ಸ್ ಎನ್ನುವ ಮಾತಿದ್ದರೂ ಜಿ.ಪಂ. ಮಾಜಿ ಸದಸ್ಯ ವೀರೇಶ ಉಂಡೋಡಿ ಪ್ರಬಲ ಆಕಾಂಕ್ಷಿ. ಕಾಂಗ್ರೆಸ್​ನಲ್ಲಿ ವಿಜಯಾನಂದ ಕಾಶಪ್ಪನವರ ಅಭ್ಯರ್ಥಿ ಆಗುವುದು ಪಕ್ಕಾ. ಆದರೆ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಮಗೆ ಅವಕಾಶ ಕೊಡಿ ಎಂದು ಕೋರುವ ಸಾಧ್ಯತೆ ಇದೆ. ಪಕ್ಷೇತರ ಅಭ್ಯರ್ಥಿ ಆಗಲಿರುವ ಎಸ್.ಆರ್. ನವಲಿಹಿರೇಮಠ ಹವಾ ಜೋರಾಗಿದೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿ ಶಿವಪ್ರಸಾದ್ ಗದ್ದಿ.