ಬಾಗಲಕೋಟೆ: ಪೋಷಣ ಅಭಿಯಾನದ ಹಣ ಕೂಡಲೇ ಬಿಡುಗಡೆಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಕಾರ್ಯಕರ್ತೆಯರು ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತ ಮೂಲಕ ಸಿಎಂ ಸಿದ್ದರಾಮಯ್ಯ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ನಡೆಸುವ ಕಟ್ಟಡಗಳ ಬಾಡಿಗೆ ಹಣ ನೀಡದಿರುವ ಕಾರಣ ಕಟ್ಟಡ ಮಾಲೀಕರು ಅಂಗನವಾಡಿಗಳನ್ನು ಖಾಲಿ ಮಾಡಿಸುತ್ತಿದ್ದಾರೆ. ಹೀಗಾಗಿ ಬೇಗ ಬಾಕಿ ಬಾಡಿಗೆ ಹಣವನ್ನು ನೀಡಬೇಕು. ಮುಂಗಡವಾಗಿ ಬಾಡಿಗೆ ಪಾವತಿಸುವ ಯೋಜನೆ ಆರಂಭಿಸಬೇಕು. ಪೋಷಣೆ ಅಭಿಯಾನದ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಅಂಗನವಾಡಿ ಮೂಲಕ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ನೀಡುವ ಮೊಟ್ಟೆಯ ಬಿಲ್‌ನ ಮೊತ್ತವನ್ನು ಮುಂಗಡವಾಗಿ ಪಾವತಿಸಬೇಕು. ಜತೆಗೆ ಅಂಗನವಾಡಿಯ ಸಿಬ್ಬಂದಿಗೆ ತಿಂಗಳ ೫ನೇ ತಾರಿಖಿನೊಳಗೆ ಸಂಬಳ ನೀಡಬೇಕು. ೫ ಹಾಗೂ ೧೦ ವರ್ಷ ಪೂರೈಸಿದ ಕಾರ್ಯಕರ್ತೆಯರಿಗೆ ಅರಿಯರ್ಸ ಬಿಡುಗಡೆಗೊಳಿಸಬೇಕು ಮತ್ತು ಎರಡು ವರ್ಷ ಮೀರಿದ ಮೇಲ್ವಿಚಾರಕರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕೆಲಸದ ಅವಽಯನ್ನು ಹೆಚ್ಚಳವನ್ನು ತಂದಿರುವ ಕಾರ್ಖಾನೆ ತಿದ್ದುಪಡಿ ಕೈಬಿಡಬೇಕು. ಮಹಿಳೆಯರನ್ನು ರಾತ್ರಿ ಪಾಳೆಯದಲ್ಲಿ ದುಡಿಸಿಕೊಳ್ಳುವ ಅವಕಾಶ ನೀಡುವುದು ಸೇರಿದಂತೆ ಎಲ್ಲ ಕಾರ್ಮಿಕ ವಿರೋಽ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು. ಕಾಂಗ್ರೆಸ್ ಭರವಸೆ ನೀಡಿದ್ದ ಆರನೇ ಗ್ಯಾರಂಟಿ ಅಂಗನವಾಡಿ ನೌಕರರಿಗೆ ೧೫ ಸಾವಿರ ರೂ.ಹಾಗೂ ಬಿಡಿಯೂಟದವರಿಗೆ ೬ ಸಾವಿರ ರೂ. ವೇತನ ಹಾಗೂ ನಿವೃತ್ತಿ ಸೌಲಭ್ಯ ಜಾರಿ ಗೊಳಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ವಾಣಿಶ್ರೀ ಜೋಶಿ, ಚಂದ್ರಕಲಾ ಕಟ್ಟಿಮನಿ, ಜಿ.ಐ.ಕಡಪಟ್ಟಿ, ಚನ್ನಮ್ಮ ಬನ್ನಿದಿನ್ನಿ, ಬಸಮ್ಮ ವಸ್ತ್ರದ, ದ್ರಾಕ್ಷಾಯಿಣಿ ಯಂಡಿಗೇರಿ, ಶಾಂತಾ ಬಡಿಗೇರ ಸೇರಿದಂತೆ ಇತರರು ಇದ್ದರು.