ಅರಸೀಕೆರೆ: ವಿದ್ಯಾರ್ಥಿಗಳಲ್ಲಿ ಸ್ನೇಹ, ಸೌಹಾರ್ದ ವೃದ್ಧಿಸಲು ಕ್ರೀಡಾಕೂಟಗಳು ನೆರವಾಗಲಿವೆ ಎಂದು ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಹೇಳಿದರು.
ಇಲ್ಲಿನ ಜೇನುಕಲ್ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ವ್ಯಾಸಂಗದ ಜತೆಗೆ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿವೆ. ಈಗಾಗಲೇ ಹೋಬಳಿ ಹಂತದ ಪಂದ್ಯಾವಳಿಗಳು ಮುಕ್ತಾಯವಾಗಿದ್ದು, ಅಂತಿಮ ಸುತ್ತಿನಲ್ಲಿ ವಿಜೇತರಾದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡು ಆಟೋಟಗಳಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕ್ರೀಡಾಳುಗಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಸ್ನೇಹ, ಸೌಹಾರ್ದ, ಬಾಂಧವ್ಯ ಬೆಸೆಯಬೇಕು ಎಂದು ಕಿವಿಮಾತು ಹೇಳಿದರು.
ಬಿಇಒ ಮೋಹನ್ ಕುಮಾರ್, ಬಿಆರ್‌ಸಿ ಶಂಕರ್, ಕಲ್ಯಾಣ್ ಕುಮಾರ್, ಪ್ರಸನ್ನ ಕುಮಾರ್, ನಾಗತಿಹಳ್ಳಿ ಸದಾನಂದ್, ಶಶಿಧರ್ ಹಾಜರಿದ್ದರು.