ಹಾಸನ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕೇಂದ್ರ ಸರ್ಕಾರ ತಡೆಯಬೇಕು ಮತ್ತು ಅವರಿಗೆ ರಕ್ಷಣೆ ನೀಡಬೇಕು ಇಲ್ಲವಾದರೆ ಆ. 15ರ ನಂತರ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಮಹಿಪಾಲ್ ಎಚ್ಚರಿಸಿದರು.
ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಬೆಳವಣಿಗೆಯಲ್ಲಿ ಹಿಂದೂಗಳ ಮೇಲೆ ಸಾಕಷ್ಟು ದೌರ್ಜನ್ಯ, ಹಿಂಸಾಚಾರ ನಡೆಯುತ್ತಿದ್ದು, ಕಾನೂನು ಸಂಪೂರ್ಣವಾಗಿ ನಿಷ್ಕಿಯೆಗೊಂಡಿದೆ. ತಕ್ಷಣವೇ ಕೇಂದ್ರ ಸರ್ಕಾರ ಅಲ್ಲಿನ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು.ಮತ್ತು ವಿಶ್ವಸಂಸ್ಥೆ ತಕ್ಷಣವೇ ಈ ಘಟನೆಯ ಕುರಿತು ಬೆಳಕು ಚೆಲ್ಲಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ವಿದ್ಯಾರ್ಥಿಗಳ ಆಂದೋಲನ ರೂಪದಲ್ಲಿ ಆರಂಭಗೊಂಡ ದಂಗೆ, ಈಗ ಇಡೀ ಆ ದೇಶದಲ್ಲಿ ಅರಾಜಕತಾವಾದಿಗಳ ಕೈವಶವಾಗಿದೆ. ಬಾಂಗ್ಲಾದ ಹಿಂದೂಗಳ ಪರವಾಗಿದ್ದ, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಕೂಡ ತಲೆಮೆರಿಸಿಕೊಂಡು ಇದೀಗ ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಹಿಂದೂಗಳು ಜಿಹಾದಿಗಳ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ. ಸದ್ಯ ಅಧಿಕಾರಕ್ಕೇರಿರುವ, ಮಧ್ಯಂತರ ಸರ್ಕಾರದಿಂದಾಗಿ ಬಾಂಗ್ಲಾ ದೇಶದಲ್ಲಿ, ಭಾರತ ವಿರೋಧಿ ಜಿಹಾದಿಗಳ ಚಟುವಟಿಕೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದರು.
ದೇಶದಲ್ಲಿ ಬಾಂಗ್ಲಾ ದೇಶದ ನುಸುಳುಕೋರರನ್ನು ಗುರುತಿಸಿ ಇದಕ್ಕಾಗಿ ಜನಗಣತಿ ಮತ್ತು ಎನ್‌ಆರ್‌ಸಿಯನ್ನ ಕಡ್ಡಾಯವಾಗಿ ಮಾಡಿ ಬಾಂಗ್ಲಾ ದೇಶದಿಂದ ಬಂದಿರುವಂತಹ ಕೋಟ್ಯಂತರ ಜನರನ್ನ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಹಿಂದೂ ಜಾಗರಣಾ ವೇದಿಕೆಯ ಲೋಕೇಶ್, ಮಂಜುನಾಥ್, ಲೇಪಾಕ್ಷಿ, ಮಂಜು ಗೌಡ ಹಾಜರಿದ್ದರು