ಜಿಲ್ಲೆ

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಆಗ್ರಹ

ಚಿತ್ರದುರ್ಗ: ಬಾಂಗ್ಲಾ ದೇಶದಲ್ಲಿನ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ಹತ್ಯೆ, ಆಸ್ತಿ ಹಾನಿ, ಲೂಟಿ, ಮಹಿಳೆಯರ ಮೇಲೆ ಅತ್ಯಾಚಾರ ಸೇರಿ ಅಮಾನವೀಯ ದಾಳಿ ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಬಾಂಗ್ಲಾ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲಿರುವ ಹಿಂದುಗಳ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಕೇಂದ್ರ ಸರ್ಕಾರ, ರಾಷ್ಟ್ರಪತಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಮಾತನಾಡಿ, ಸರ್ವ ಧರ್ಮೀಯರನ್ನು ಸಮನಾಗಿ ಕಂಡು ಒಗ್ಗೂಡಿಸಿಕೊಂಡು ಹೋಗುವ ಮೂಲಕ ವಿಶ್ವದಲ್ಲೇ ಪರಧರ್ಮ ಸಹಿಷ್ಣುತೆ ಅನುಸರಿಸುತ್ತಿರುವ ಏಕೈಕ ರಾಷ್ಟ್ರ ಭಾರತ. ಆದರೆ, ಭಾರತೀಯರೆ, ಅನ್ಯ ರಾಷ್ಟ್ರಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಬೇಸರಿಸಿದರು.

ಅರಬ್ ರಾಷ್ಟ್ರಗಳ ರಾಜರು ದಬ್ಬಾಳಿಕೆ ಮೂಲಕ ಇಸ್ಲಾಮೀಕರಣಕ್ಕೆ ಪ್ರಚೋದಿಸಿದರು. ಅಂದು-ಇಂದು ಭಾರತೀಯರೆ, ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಬಾಂಗ್ಲಾದಲ್ಲಿ ದಲಿತ, ಹಿಂದುಳಿದ, ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ ನಡೆಯುತ್ತಿವೆ. ಅಲ್ಲಿನ ಹಿಂದುಗಳ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಬಾಂಗ್ಲಾಗೆ ಭಾರತ ಮತ್ತು ಚೀನಾ ಆರ್ಥಿಕ ಮೂಲ. ಚೀನಾದಲ್ಲಿ ತಯಾರಾಗುವ ವೆಪನ್ಸ್‌ಗಳು ಅನ್ಯ ದೇಶದಲ್ಲಿನ ಭಾರತೀಯರ ಮೇಲೆ ಪ್ರಯೋಗವಾಗುತ್ತಿವೆ. ಹೀಗಾಗಿ ಹಿಂದುಗಳ ಆಂತಕಕ್ಕೆ ಕಾರಣವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ, ರಕ್ಷಣೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಆರ್‌ಆರ್‌ಎಸ್‌ನ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿ ರಾಮ್ ಮಾತನಾಡಿ, ಹಿಂದುಗಳು ಉಳಿದರೆ ಮಾತ್ರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಇನ್ನಿತರೆ ಎಲ್ಲ ಪಕ್ಷಗಳು ಉಳಿಯುತ್ತವೆ. ಇಲ್ಲದಿದ್ದರೆ, ಬಾಂಗ್ಲಾದಲ್ಲಿ ಆದಂತ ಸ್ಥಿತಿ ಮುಂದಿನ ದಿನಗಳಲ್ಲಿ ಭಾರತದಲ್ಲಾದರೂ ಅಚ್ಚರಿ ಪಡಬೇಕಿಲ್ಲ ಎಂದು ಎಚ್ಚರಿಸಿದರು.

ನಮ್ಮ ಹೋರಾಟ ಇಲ್ಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರ, ರಾಜಕೀಯ ಪಕ್ಷ, ಭಾರತದಲ್ಲಿನ ಮುಸ್ಲಿಂ ಸಮುದಾಯದವರ ವಿರುದ್ಧವಲ್ಲ. ಬಾಂಗ್ಲಾದಲ್ಲಿನ ಮತಾಂಧರ ಅನಾಗರಿಕ ವರ್ತನೆ, ಹಿಂದುಗಳ ಮೇಲಿನ ದೌರ್ಜನ್ಯದ ವಿರುದ್ಧ. ನಮ್ಮವರ ಸಂಖ್ಯೆ ಕ್ಷೀಣಿಸಿದಂತೆಲ್ಲ ಪರಕೀಯರಿಂದ ದಾಳಿಗೆ ಒಳಗಾಗುವುದು ತಪ್ಪುವುದಿಲ್ಲ ಎಂದು ಎಚ್ಚರಿಸಿದರು.

ವಿಶ್ವ ಶಾಂತಿ ಬಯಸುವ ಭಾರತ ಇದಕ್ಕೆ ಮೊದಲ ಆದ್ಯತೆ ನೀಡಿ ರಾಜತಾಂತ್ರಿಕ ಮಾತುಕತೆ ಮೂಲಕ ಬಗೆಹರಿಸಿ, ಅಲ್ಲಿನ ಹಿಂದುಗಳ ರಕ್ಷಣೆಗೆ ಮುಂದಾಗಬೇಕು. ಒಂದು ವೇಳೆ ಇದಕ್ಕೆ ಒಪ್ಪದಿದ್ದರೆ, ಯುದ್ಧ ಸಾರುವ ಮೂಲಕವಾದರೂ ತಕ್ಕ ಪಾಠ ಕಲಿಸಲು ನಮ್ಮ ಪ್ರಧಾನಿ ಕ್ರಮಕೈಗೊಳ್ಳಬೇಕು. ಇಸ್ಕಾನ್‌ನ ಚಿನ್ಮಯಿ ಕೃಷ್ಣದಾಸ್ ಅವರು ಸೇರಿದಂತೆ ಬಂಧಿತರಾದವರನ್ನು ಸೆರೆವಾಸದಿಂದ ಮುಕ್ತಗೊಳಿಸಬೇಕು ಎಂದು ಕೋರಿದರು.

ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ನೇರ‌್ಲಗುಂಟೆ ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಮಲ್ಲಿಕಾರ್ಜುನ್, ಜಿ.ಎಂ.ಸುರೇಶ್, ಸಂಪತ್‌ಕುಮಾರ್, ಸುರೇಶ್ ಸಿದ್ದಾಪುರ, ಸೌಭಾಗ್ಯಾ ಬಸವರಾಜನ್, ಬಸಮ್ಮ, ಬದ್ರಿನಾಥ್, ನಾಗರಾಜ್ ಬೇದ್ರೆ, ಛಲವಾದಿ ತಿಪ್ಪೇಸ್ವಾಮಿ, ಚಂದ್ರಶೇಖರ್, ರುದ್ರೇಶ್, ಓಂಕಾರ್ ಇತರರಿದ್ದರು.