ಹಾಸನ: ಕೂಲಿ ಇತ್ಯಾದಿ ಕಾರಣ ನೀಡಿ ಅಕ್ರಮವಾಗಿ ಬಾಂಗ್ಲಾದೇಶದಿಂದ ವಲಸೆ ಬಂದಿರುವವರಿಗೆ ಮಲೆನಾಡು ಭಾಗದಲ್ಲಿ ಬಾಡಿಗೆಗೆ ಮನೆ ನೀಡಿ ವಾಸಕ್ಕೆ ಅವಕಾಶ ಮಾಡಿಕೊಡುತ್ತಿರುವವರ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಬೇಕು ಎಂದು ವಕೀಲ ಸಕಲೇಶಪುರದ ಕವನ್‌ಗೌಡ ಆಗ್ರಹಿಸಿದರು.
ಬಾಂಗ್ಲಾದೇಶ ಮೊದಲಾದ ಕಡೆಗಳಿಂದ ಅಕ್ರಮವಾಗಿ ಜಿಲ್ಲೆಯ ಕಾಫಿ ತೋಟಗಳಿಗೆ ಅನೇಕರು ಬಂದಿದ್ದಾರೆ ಎಂಬ ಆರೋಪ ಈವರೆಗೂ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಇಂತಹ ಕೆಲಸಗಾರರ ವಿವರಗಳನ್ನು ಬಹುತೇಕ ಕಾಫಿ ಬೆಳೆಗಾರರು ನೀಡಿದ್ದಾರೆ. ಇತ್ತೀಚೆಗೆ ಸಕಲೇಶಪುರ, ಬೇಲೂರು, ಆಲೂರು ಮುಂತಾದ ಕಾಫಿ ಪ್ರದೇಶಕ್ಕೆ ಹೊಂದಿಕೊಂಡಿರುವ ನಗರ ಮತ್ತು ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿ ವಿವಿಧ ಕೆಲಸಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇದು ಆತಂಕ ಮೂಡಿಸಿದ್ದು, ಕೂಡಲೇ ಸಂಬಂಧಪಟ್ಟವರು ಪರಿಶೀಲಿಸಿ ತನಿಖೆ ನಡೆಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಈಗಾಗಲೇ ಆಧಾರ್‌ಕಾರ್ಡ್ ನಕಲಿ ಮಾಡಿ ಜಿಲ್ಲೆಗೆ ಬಂದವರ ಅಸಲಿಯತ್ತು ಬಯಲಾಗಿದೆ. ಅನೇಕ ಕಡೆಗಳಲ್ಲಿ ಬಾಡಿಗೆ ಮನೆಗಳಲ್ಲಿ ಉಳಿದುಕೊಂಡು ರೆಸಾರ್ಟ್, ಹೋಟೆಲ್, ಮನೆ ಹಾಗೂ ತೋಟದ ಕೆಲಸಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇವರು ಮುಂದಿನ ದಿನಗಳಲ್ಲಿ ಬಾಡಿಗೆ ಮನೆ ಕರಾರಿನ ಮೂಲಕ ವಾಸಸ್ಥಳ ದೃಢೀಕರಣ ಪತ್ರ ಮಾಡಿಕೊಂಡು ಮತದಾರರ ಗುರುತಿನ ಚೀಟಿಯನ್ನೂ ಪಡೆಯಬಹುದು ಎಂದು ಕಳವಳ ಹೊರ ಹಾಕಿದರು.
ವಲಸಿಗರು ಇಲ್ಲಿಯೇ ಶಾಶ್ವತವಾಗಿ ನೆಲೆಸಿದರೆ ಮುಂದೆ ಕಾನೂನುಬಾಹಿರ ಚಟುವಟಿಕೆಗಳು ನಡೆಯುವ ಅಪಾಯ ಇದೆ. ಹಾಗೆಯೇ ಕೊಲೆ, ಸುಲಿಗೆ ಕೃತ್ಯಗಳೂ ಅಧಿಕ ಆಗುವ ಸಾಧ್ಯತೆ ಇದೆ. ಈಗಾಗಲೇ ಬಾಳ್ಳುಪೇಟೆ ಮೊದಲಾದ ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅಂತಹವರನ್ನು ಪತ್ತೆ ಹಚ್ಚಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಳೆದ 15 ದಿನಗಳಿಂದ ಬಾಳ್ಳುಪೇಟೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಂದ್ರ ಸರ್ಕಾರದ ನಿರ್ದೇಶನ ಇದ್ದರೂ ಕೂಡ ಇಲ್ಲಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಲೆನಾಡು ಪ್ರದೇಶದಲ್ಲಿ ವಾಸವಾಗಿರುವಂತಹ ಅಕ್ರಮ ವಲಸಿಗರ ಬಗ್ಗೆ ಸೂಕ್ತ ನಿಗಾ ವಹಿಸಬೇಕು ಮತ್ತು ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲನೆ ನಡೆಸಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.