ಜಿಲ್ಲೆ

ಬಹುರೂಪಿಯಲ್ಲಿ ಜಾನಪದ ಸಂಭ್ರಮ

ಮೈಸೂರು: ರಂಗಾಯಣ ಹಮ್ಮಿಕೊಂಡಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಶುಕ್ರವಾರ ದೇಶದ ವಿವಿಧ ಜಾನಪದ ಕಲಾವಿದರು ನಡೆಸಿಕೊಟ್ಟ ಜಾನಪದ ಸಂಭ್ರಮ ಕಾರ್ಯಕ್ರಮ ಮುದ ನೀಡಿತು.

ಕಿಂದರಿಜೋಗಿ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಕರ್ನಾಟಕದ ಕಲಾವಿದರು ತಮ್ಮ ಕಲಾ ಶ್ರೀಮಂತಿಕೆಯನ್ನು ಪ್ರಸ್ತುತ ಪಡಿಸಿದರು. ಜಾನಪದ ಕಾರ್ಯಕ್ರಮವನ್ನು ವೀಕ್ಷಿಸಲು ರಂಗಾಯಣ ಆವರಣ ದಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು. ಜನರು ಕರತಾಡನದ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಿದರು.

ಮಹಾರಾಷ್ಟ್ರದ ಸಾಂಗ್ಲಿಯ ಸ್ಯಾಪ್ ಬಂದ್ಗರ್ ತಂಡ ನಡೆಸಿಕೊಟ್ಟ ಧಂಗರ್ ನೃತ್ಯ ನಯನ ಮನೋಹರವಾಗಿತ್ತು. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಧಂಗಾರ್‌ಗಳು ಜಾನುವಾರುಗಳನ್ನು ಮೇಯಿಸುವ ಸಂದರ್ಭ ಪ್ರಕೃತಿ ಹಾಗೂ ದೇವರ ಕುರಿತ ಗೀತೆಗೆ ನೃತಿಸುತ್ತಾರೆ. ಪ್ರಕೃತಿ ಹಾಗೂ ದೇವರನ್ನು ಒಲಿಸಿಕೊಳ್ಳಲು ಈ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ. ವರ್ಣರಂಜಿತ ವಸ್ತ್ರ ಧರಿಸಿದ ಕಲಾವಿದರು ದೇವರು, ಪ್ರಕೃತಿ ಕುರಿತು ರಚಿಸಿದ ಹಾಡನ್ನು ಹಾಡುತ್ತಾ, ತಾಳಕ್ಕೆ ತಕ್ಕಹಾಗೆ ಹೆಜ್ಜೆ ಹಾಕಿ ನೃತಿಸುವ ಮೂಲಕ ಗಮನ ಸೆಳೆದರು.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮವನ್ನು ವಿದೇಶಿಗರು ಕಣ್ತುಂಬಿಕೊಂಡರು

ಮಧ್ಯಪ್ರದೇಶದ ಧುಲಿಯಾ ಬುಡಕಟ್ಟು ಜನಾಂಗದವರ ‘ಗುಡುಂಬಾಜ’ ನೃತ್ಯ ಗಮನ ಸೆಳೆಯಿತು. ಬಡೇ ದೇವ್, ಬಡಿ ದೇವಿ, ಶೇಶ್ ನಾಗ್ ಮುಂತಾದ ದೇವತೆಗಳನ್ನು ಪೂಜಿಸಲು ಈ ನೃತ್ಯವನ್ನು ಪ್ರಸ್ತುತ ಪಡಿಸಲಾಗುತ್ತದೆ. ಗುಡುಂಬಾಜ ಎಂಬ ಡ್ರಮ್ ಅನ್ನು ಸೊಂಟಕ್ಕೆ ಕಟ್ಟಿಕೊಂಡು ನೃತ್ಯ ಮಾಡಲಾಗುತ್ತದೆ. ಮಧ್ಯಪ್ರದೇಶದ ಮಾಯಾರಾಂ ದುರ್ವೆ ತಂಡದವರು ಈ ನೃತ್ಯವನ್ನು ಪ್ರಸ್ತುತ ಪಡಿಸಿದರು. ಇದರೊಂದಿಗೆ ಚಿಕ್ಕಮಗಳೂರಿನ ಬಸವಜ್ಯೋತಿ ಮಹಿಳಾ ತಂಡದಿಂದ ವೀರಗಾಸೆ ನೃತ್ಯ, ಚಿಕ್ಕಅರಸಿನಕೆರೆಯ ಕೀರ್ತನಾ ತಂಡ ನಡೆಸಿಕೊಟ್ಟ ಪೂಜಾ ಕುಣಿತ ಕಣ್ಮನ ಸೆಳೆಯಿತು.

ನಾಟಕ ಪ್ರದರ್ಶನ

ಕಿರುರಂಗಮಂದಿರದಲ್ಲಿ ಗಣೇಶ್ ಮಂದಾರ್ತಿ ನಿರ್ದೇಶನದ ‘ದ್ರೋಪತಿ ಹೇಳ್ತವ್ಳೆ’ ಕನ್ನಡ ನಾಟಕವನ್ನು ಬೆಂಗಳೂರಿನ ರಂಗಾಸ್ಥೆ ತಂಡದವರು ಪ್ರಸ್ತುತ ಪಡಿಸಿದರು. ಭೂಮಿಗೀತ ರಂಗಮಂದಿರದಲ್ಲಿ ಉತ್ತರ ಪ್ರದೇಶದ ಕಮಲಾಶಂಕರ್ ಧನವಂತಿದೇವಿ ಫೌಂಡೇಷನ್ ತಂಡದಿಂದ ಪ್ರಸೂನ್ ನರೇನ್ ಶ್ರೀವಾಸ್ತವ ನಿರ್ದೇಶನದ ‘ದುಖ್ವಾ ಮೇ ಬೀತಲ್ ರತಿಯಾ’ ಹಿಂದಿ ನಾಟಕ ಪ್ರದರ್ಶನಗೊಂಡಿತು. ವನರಂಗದಲ್ಲಿ ಉಡುಪಿಯ ಥಿಯೇಟರ್ ಯಕ್ಷ ತಂಡದಿಂದ ಪೃಥ್ವಿರಾಜ ಕವತ್ತಾರು ನಿರ್ದೇಶನದ ಸೀತೆಯ ವ್ಯಥೆ ಕನ್ನಡ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು. ಕಲಾಮಂದಿರದಲ್ಲಿ ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘದಿಂದ ಸಿ.ಬಸವಲಿಂಗಯ್ಯ ನಿರ್ದೇಶನದ ಕಲ್ಯಾಣದ ಬಾಗಿಲು ಕನ್ನಡ ನಾಟಕ ಪ್ರದರ್ಶನಗೊಂಡಿತು.

ಚಲನಚಿತ್ರ ಪ್ರದರ್ಶನ

ಶ್ರೀರಂಗದಲ್ಲಿ ವೀರಪ್ಪ ಮರಳವಾಡಿ ನಿರ್ದೇಶನದ ಅಕ್ಕಮಹಾದೇವಿ ಹಾಗೂ ವಚನಕಾರ್ತಿಯರು ಕನ್ನಡ ಸಿನಿಮಾ, ಹೋಲಿ ಮೋರಿಸ್ ನಿರ್ದೇಶನದ ಬಬೂಶ್‌ಕಾಸ್ ಆಫ್ ಜೆರ‌್ನೋಬಿಲ್ ಇಂಗ್ಲಿಷ್ ಸಿನಿಮಾ, ಪುಟ್ಟಣ್ಣ ಕಣಗಾಲ್ ನಿರ್ದೇಶನದ ಗೆಜ್ಜೆಪೂಜೆ ಕನ್ನಡ ಸಿನಿಮಾ ಪ್ರದರ್ಶನಗೊಂಡಿತು.