ಮೈಸೂರು: ಅಕಾಲಿಕ ಮಳೆಯಿಂದಾಗಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಕಳೆಗುಂದಿದೆ. ಸಂಜೆ ಹೊತ್ತಿನಲ್ಲಿ ಜನರಿಲ್ಲದೆ ರಂಗಾಯಣ ಭಣಗುಟ್ಟುತ್ತಿದೆ.
ಶನಿವಾರ ರಂಗೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಇದರಿಂದ ಸಂಭ್ರಮ, ಸಡಗರ ಮೇಳೈಸಬೇಕಿತ್ತು. ಆದರೆ, ರಂಗಾಯಣದ ಆವರಣದಲ್ಲಿ ವ್ಯತಿರಿಕ್ತ ವಾತಾವರಣವಿತ್ತು. ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಕೊಂಚ ಮಟ್ಟಿಗೆ ಜನರು ಹಾಜರಿದ್ದರು. ಆದರೆ, ಸಂಜೆ ಹೊತ್ತಿನಲ್ಲಿ ಜನ ಸಮೂಹ ಕರಗಿತು. ವಾರಾಂತ್ಯವಾದ್ದರಿಂದ ಕುಟುಂಬ ಸಹಿತ ರಂಗಾಸಕ್ತರು, ಸಾರ್ವಜನಿಕರು ಇಲ್ಲಿಗೆ ಹೆಚ್ಚಿನ ಸಂಖ್ಯೆ ಲಗ್ಗೆ ಇಡುತ್ತಾರೆ. ಆದರೆ, ಮಳೆಯಿಂದ ಜನರು ಇತ್ತ ಬರಲೇ ಇಲ್ಲ. ವಸ್ತುಪ್ರದರ್ಶನ ಮಳಿಗೆಗಳು, ಆಹಾರ ಮಳಿಗೆ ಕಡೆ ನಿರೀಕ್ಷಿತ ಮಟ್ಟದಲ್ಲಿ ಜನರು ಇರಲಿಲ್ಲ. ಜನರಿಂದ ಗಿಜಿಗುಡುತ್ತಿದ್ದ ರಂಗಾಯಣದ ಆವರಣದಲ್ಲೂ ಈ ಸಲ ಖಾಲಿ ಹೊಡೆಯುತ್ತಿತ್ತು.
ಜನರ ಕೊರತೆ ಮತ್ತು ಮಳೆಯಿಂದಾಗಿ ವಸ್ತುಪ್ರದರ್ಶನದಲ್ಲಿ ವಿವಿಧ ಉತ್ಪನ್ನಗಳನ್ನು ಮಾರಾಟಕ್ಕೆ ಇಟ್ಟಿರುವ ವರ್ತಕರು, ವ್ಯಾಪಾರಸ್ಥರು ವಹಿವಾಟು ಇಲ್ಲದೆ ತಲೆ ಮೇಲೆ ಕೈಇಟ್ಟುಕೊಂಡು ಕುಳಿತಿದ್ದರು. ಇನ್ನೂ ಎರಡು ದಿನ ಮಳೆ ಮುನ್ಸೂಚನೆಯಿಂದ ವ್ಯಾಪಾರ ಆಗುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿ ಮುಳುಗಿದ್ದು, ನಷ್ಟದ ಚಿಂತನೆಯಲ್ಲಿ ಮುಳುಗಿದ್ದಾರೆ.
ಮಳೆಯಿಂದ ಮಳಿಗೆಗಳೆಲ್ಲ ಸೋರುತ್ತಿವೆ. ಇದನ್ನು ತಡೆಯಲು ಟಾರ್ಪಲ್ ಹೊದಿಕೆಯನ್ನು ಹಾಕಲಾಗಿದೆ. ಜನರು ಓಡಾಡುವ ಕಾರಿಕಾಡ್‌ನಲ್ಲಿ ಟಾರ್ಪಲ್ ಹಾಕಿಲ್ಲ. ಇದರಿಂದ ನೀರು ಜಿನುಗುತ್ತದೆ. ಹನಿಗಳಿಂದ ನೆನೆದುಕೊಂಡು ಜನರು ತಿರುಗಾಡುವಂತಾಗಿದೆ.
ವಹಿವಾಟಿಗೂ ತೊಂದರೆಯಾಗುತ್ತಿದೆ. ವಸ್ತುಗಳು, ಉತ್ಪನ್ನಗಳು ಹಾಳಾಗುತ್ತಿವೆ. ವ್ಯಾಪಾರವೂ ಆಗುತ್ತಿಲ್ಲ. ಇದರಿಂದ ಕಂಗಾಲದ ಕೆಲ ವ್ಯಾಪಾರಸ್ಥರು ಮಳಿಗೆಯನ್ನು ತೆರವುಗೊಳಿಸಿ ಸಾಮಗ್ರಿಗಳೊಂದಿಗೆ ತಮ್ಮ ಊರುಗಳಿಗೆ ವಾಪಸ್ ಹೋಗಿದ್ದು, ಇದರಿಂದ ಕೆಲ ಮಳಿಗೆಗಳು ಖಾಲಿ ಹೊಡೆಯುತ್ತಿವೆ.
ಸಿನಿಮಾಕ್ಕೆ ಪ್ರೇಕ್ಷಕರ ಕೊರತೆ:
ರಂಗಾಯಣದ ಶ್ರೀರಂಗ ಮಂದಿರದಲ್ಲಿ ಆಂಗ್ಲ ಭಾಷೆಯ ಹಿಮಾಲಯ ವಿತ್ ಮೈಕಲ್ ಪಾಲಿನ್-ಲೀಪಿಂಗ್ ಟೈಗರ್ಸ್ ಆ್ಯಂಡ್ ನೇಕೆಡ್, ಇಂಡೋ-ಪಾಕ್ ಕಾನ್‌ಫ್ಲಿಕ್ಸ್ , ಮುಕ್ತಿ, ಹಿಂದಿ ಭಾಷೆಯ 1971 ಸಿನಿಮಾ ಪ್ರದರ್ಶನ ಕಂಡಿತು. ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಇರಲಿಲ್ಲ.
ಮಳೆಯಲ್ಲೇ ವೀಕ್ಷಣೆ:
ಮಳೆಯಿಂದಾಗಿ ಬಿ.ವಿ.ಕಾರಂತ ರಂಗವೇದಿಕೆಯಲ್ಲಿ ಜನಪದೋತ್ಸವ ಸಂಜೆ ನಡೆಯಿತು. ಮೈಸೂರಿನ ಸುಂದರೇಶ ಮತ್ತು ತಂಡದಿಂದ ಡೊಳ್ಳು ಕುಣಿತ ಮತ್ತು ಮೈಸೂರಿನ ಯದುಕುಮಾರ್ ಮತ್ತು ತಂಡದಿಂದ ನಾದಸ್ವರ ಸಂಗೀತ ಕಾರ್ಯಕ್ರಮ ಪ್ರಸ್ತುಪಡಿಸಲಾಯಿತು. ಸಭಿಕರು ಮಳೆಯಲ್ಲೇ ನಿಂತು ಕಾರ್ಯಕ್ರಮ ವೀಕ್ಷಿಸಿದರು.
ಸಂಸ್ಕೃತ ನಾಟಕಕ್ಕೆ ನಿರುತ್ಸಾಹ, ಕನ್ನಡ ನಾಟಕಕ್ಕೆ ಉತ್ಸಾಹ:
ಭೂಮಿಗೀತದಲ್ಲಿ ಪ್ರದರ್ಶನ ಕಂಡ ಸಂಸ್ಕೃತ ಭಾಷೆಯ ಕರ್ಣಭಾರಂ ನಾಟಕಕ್ಕೆ ಜನರೇ ಇರಲಿಲ್ಲ. ಹೀಗಾಗಿ, ಖಾಲಿ ಖುರ್ಚಿಗಳ ದರ್ಶನ ಕಂಡುಬಂತು. ಮಹಾಕವಿ ಭಾಸ ರಚನೆಯ ಕೆ.ಎಚ್.ಫಣಿಕ್ಕರ್ ನಿರ್ದೇಶನದಲ್ಲಿ ಕೇರಳದ ತಿರುವಂತನಪುರಂನ ಸೋಪಾನಂ ತಂಡದ ಸದಸ್ಯರು ಉತ್ತಮವಾಗಿ ಅಭಿನಯಿಸಿದರು. ಭಾಷೆ ಕಾರಣಕ್ಕೆ ಜನರು ಸೇರಿರಲಿಲ್ಲ.
ಕಿರುರಂಗಮಂದಿರದಲ್ಲಿ ಪ್ರದರ್ಶನ ಕಂಡ ‘ಚಿದಂಬರ ರಹಸ್ಯ’ ನಾಟಕ ಹೌಸ್‌ಫುಲ್ ಆಗಿತ್ತು. ಪೂರ್ಣಚಂದ್ರ ತೇಜಸ್ವಿ ರಚನೆಯ ಎಚ್.ಎಸ್.ಸುರೇಶ್ ಬಾಬು ನಿರ್ದೇಶನದ ಮೈಸೂರು ಅಭಿಯಂತರರು ತಂಡದ ಕಲಾವಿದರು ಅಭಿಯಿಸಿದ ಈ ನಾಟಕವನ್ನು ನೋಡಲು ರಂಗಮಂದಿರ ತುಂಬಿಹೋಗಿತ್ತು.
ಕಲಾಮಂದಿರದಲ್ಲಿ ಪ್ರದರ್ಶನ ಕಂಡ ಮತ್ತೊಂದು ಕನ್ನಡ ನಾಟಕ ‘ಕರಿಮಾಯಿ’ಗೆ ಜನರಿಂದ ಸ್ಪಂದನೆ ದೊರೆಯಿತು. ಡಾ. ಚಂದ್ರಶೇಖರ ಕಂಬಾರ ರಚನೆಯ ಬಿ.ಜಯಶ್ರೀ ನಿರ್ದೇಶನದ ನಾಟಕವನ್ನು ಬೆಂಗಳೂರಿನ ಸ್ಪಂದನ ತಂಡದ ಕಲಾವಿದರು ಉತ್ತಮವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.