ಜಿಲ್ಲೆ

ಬಹುಮತ ಸಾಬೀತು ಪಡಿಸಲು ಪಟ್ಟು, ಆನೇಕಲ್ ಪುರಸಭೆ ಎದುರು ಬಿಜೆಪಿ ಸದಸ್ಯರಿಂದ ಪ್ರತಿಭಟನೆ

ಆನೇಕಲ್: ಪುರಸಭೆ ಅಧ್ಯಕ್ಷರಿಗೆ ಬಹುಮತ ಸಾಬೀತು ಪಡಿಸಲು ಆಗ್ರಹಿಸಿದರೂ ಮನ್ನಣೆ ನೀಡದೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಬಿ.ನಾಗರಾಜು ದೂರಿದರು.

ಆನೇಕಲ್ ಪುರಸಭೆ ಕಾರ್ಯಾಲಯದ ಮುಂಭಾಗ ಮಂಗಳವಾರ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾತನಾಡಿದರು. ಬಹುಮತ ಸಾಬೀತು ಪಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಈ ಬಗ್ಗೆ ಅಧ್ಯಕ್ಷರಿಗೆ ತಿಳಿದಿದ್ದರೂ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದರು.

ಪುರಸಭೆಯಲ್ಲಿ ಬಹುಮತ ಸಾಬೀತು ಪಡಿಸಿ ಬಳಿಕ ಸಭೆ ನಡೆಸಬೇಕು. ಆದರೆ ಮಾ.30ರಂದು ಬಜೆಟ್ ಸಭೆ ಕರೆದಿದ್ದಾರೆ. ಮೊದಲು ಬಹುಮತ ಸಾಬೀತು ಪಡಿಸಿ ಬಜೆಟ್ ಸಭೆ ನಡೆಸಲಿ ಎಂದು ಒತ್ತಾಯಿಸಿದರು.

ಖಾತೆ ಬದಲಾವಣೆ ಮಾಡಲು ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಬಡಾವಣೆಗಳನ್ನು ಅಕ್ರಮವಾಗಿ ಪುರಸಭೆಗೆ ಸೇರಿಸಿಕೊಂಡು ಭ್ರಷ್ಟಾಚಾರ ಮಾಡುವ ಮೂಲಕ ಬಂಡವಾಳಶಾಹಿಗಳ ಪರ ನಿಂತು ಬಡವರಿಗೆ ಮನೆ ನಿರ್ಮಾಣ ಮಾಡಲು ಸಾಧ್ಯವಾಗದ ರೀತಿಯಲ್ಲಿ ಅಧ್ಯಕ್ಷರು ವರ್ತಿಸುತ್ತಿದ್ದಾರೆ ಎಂದು ದೂರಿದರು.

ಪುರಸಭೆಯಲ್ಲಿ ಕಂದಾಯ ವಸೂಲಿಯ ನಾಲ್ಕು ಪುಸ್ತಕಗಳು ನಾಪತ್ತೆಯಾಗಿವೆ. ಈ ಬಗ್ಗೆ ಪ್ರಶ್ನಿಸಿದರೂ ಸರಿಯಾದ ಉತ್ತರ ನೀಡುತ್ತಿಲ್ಲ ಎಂದರು.

ಸದಸ್ಯ ಏರ್ಟೆಲ್ ಸುರೇಶ್ ಮಾತನಾಡಿ, ಪುರಸಭೆ ಅಧ್ಯಕ್ಷರು ಅಧಿಕಾರ ಹಿಡಿಯುವ ಸಂದರ್ಭದಲ್ಲಿ 17 ಸದಸ್ಯರ ಬೆಂಬಲ ಇತ್ತು. ಚುನಾವಣಾ ಖರ್ಚು ವೆಚ್ಚದ ಲೆಕ್ಕವನ್ನು ಚುನಾವಣಾ ಆಯೋಗಕ್ಕೆ ನೀಡಿದ ಹಿನ್ನೆಲೆಯಲ್ಲಿ ಮೂರು ಜನ ಕಾಂಗ್ರೆಸ್ ಸದಸ್ಯರು ಅಮಾನತು ಆಗಿದ್ದಾರೆ. ಆದ್ದರಿಂದ ಪುರಸಭೆ ಅಧ್ಯಕ್ಷರು ಮತ್ತೆ ಬಹುಮತ ಸಾಬೀತುಪಡಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯ ಪವಿತ್ರಾ ರಘು ಮಾತನಾಡಿ, ಅಧ್ಯಕ್ಷರು ಅವರಿಗೆ ಬೇಕಾದ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ನೀಡಿ, ಬಿಜೆಪಿ ಸದಸ್ಯರಿರುವ ವಾರ್ಡ್‌ಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.

ಆನೇಕಲ್ ಬಿಜೆಪಿ ಮಂಡಲ ಅಧ್ಯಕ್ಷ ಎನ್. ಶಂಕರ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಯಂಗಾರೆಡ್ಡಿ, ನಾಮನಿರ್ದೇಶಿತ ಸದಸ್ಯರಾದ ಜಗದೀಶ್, ಮಂಜುನಾಥ್, ಜನಾರ್ದನ್, ಸುಧಾ ಜಯದೇವ್, ಸಿತಿನ್ ಮತ್ತಿತರರು ಹಾಜರಿದ್ದರು.

17 ಸದಸ್ಯರು ನನಗೆ ಮತಹಾಕಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಮೂರು ಜನ ಅಮಾನತುಗೊಂಡ ಬಳಿಕ ಹದಿನಾಲ್ಕು ಜನ ಸದಸ್ಯರ ಬೆಂಬಲ ನನಗಿದೆ. ಮತ್ತೆ ಬಹುಮತ ಸಾಬೀತು ಪಡಿಸುವ ಅವಶ್ಯಕತೆ ಇಲ್ಲ, ಅಭಿವೃದ್ಧಿ ಸಹಿಸದ ಬಿಜೆಪಿ ಸದಸ್ಯರು ಗೊಂದಲ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ ಆದರೆ ಜನರನ್ನು ದಾರಿ ತಪ್ಪಿಸುವ ಕೆಲಸ ಬಿಜೆಪಿ ಮಾಡಬಾರದು. ಎನ್. ಎಸ್ ಪದ್ಮನಾಭ ಪುರಸಭೆ ಅಧ್ಯಕ್ಷ