ಬಾಗಲಕೋಟೆ: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಗುಂಪುಗಾರಿಕೆ ಮಿತಿಮೀರಿದೆ. ಸಿದ್ದು ಗುಂಪು, ಡಿಕೆಶಿ ಗುಂಪು, ದಲಿತರ ಗುಂಪು, ವೀರಶೈವರ ಗುಂಪುಗಳು ಇವೆ. ಎಲ್ಲಗೂ ತಮಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಕೇಳುತ್ತಿದ್ದಾರೆ. ಇಂತ ಸಂದರ್ಭದಲ್ಲಿ ನಾನು ಕೊಡುವೆ ಸಲಹೆ ಎಂದರೆ ಸಿದ್ದರಾಮಯ್ಯ ಅವರು ಕೂಡಲೇ ಪಕ್ಷದ ಶಾಸಕಾಂಗ ಸಭೆ ಕರೆದು ಯಾರಿಗೆ ಬಹುಮತ ಇದೆಯೋ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಮಾಜಿ ಡಿಸಿಎಂ, ಹಾಲಿ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಆಡಳಿತದ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ತಮ್ಮ ಶಾಸಕರು ಹಾಗೂ ಪಕ್ಷದ ಮುಖಂಡರನ್ನು ಹದ್ದುಬಸ್ತಿನಲ್ಲಿ ಇಡಲು ಅವರಿಗೆ ಆಗುತ್ತಿಲ್ಲ. ಹೈಕಮಾಂಡ್‌ಗೂ ಇದು ಸಾಧ್ಯವಾಗುತ್ತಿಲ್ಲ. ಇದರಿಂದ ರಾಜ್ಯದ ಆಡಳಿತ ಕುಂಠಿತವಾಗಿದೆ. ಸರ್ಕಾರ ನಡೆಸಿ, ಇಲ್ಲವಾದ್ರೆ ಇದೊಂದು ಆಯತಪ್ಪಿದ ಸರ್ಕಾರವಾಗುತ್ತದೆ ಎಂದು ಚುಚ್ಚಿದರು.
ರಾಜ್ಯದ ಸಿದ್ದರಾಮಯ್ಯ ಅವರದ್ದು ಹಗರಣಗಳ ಸರ್ಕಾರ. ಈಗ ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ಹಿಂದೆ ರಿಡು, ಅರ್ಕಾವತಿ ಹಗರಣ ಆಗಿವೆ. ಇಂತಹ ಕೆಟ್ಟ ಸರ್ಕಾರವನ್ನು ನಾನು ನೋಡಿರಲಿಲ್ಲ. ಮುಡಾ ಹಗರಣವನ್ನು ಮಾನ ಮರ್ಯಾದೆ ಇಲ್ಲದೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಪದೇ ಪದೇ ತಾವು ಸಮಾಜವಾದಿ, ಅಹಿಂದ ನಾಯಕ ಎನ್ನುತ್ತಾರೆ. ಬಡವರು, ದೀನ-ಸದಲಿತರ ಬಗ್ಗೆ ಪ್ರಮಾಣಿಕ ಕಳಕಳಿ ಹೊಂದಿದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಕನಿಷ್ಠ ಪಕ್ಷ ಮುಡಾ, ಬುಡಾ, ಬಿಡಿಎ ಇವುಗಳ ಹಗರಣಗಳ ಬಗ್ಗೆ ವಿಶೇಷ ತನಿಖೆ ಮಾಡಲು ಆಯೋಗ ರಚನೆ ಮಾಡಬೇಕು. ನ್ಯಾಯಾಂಗ ಇಲ್ಲವೇ ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರು ಮೌಲ್ಯಾಧಾರಿತ ರಾಜಕಾರಣಿ ರಾಮಕೃಷ್ಣ ಹೆಗಡೆ ಜೊತೆ ಬೆಳೆದವರು. ಹೆಗಡೆ ಅವರ ವಿರುದ್ಧ ಒಂದು ಸಣ್ಣ ಆಪಾದನೆ ಬಂದಾಗ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದನ್ನು ಈಗ ನಾನು ಸಿದ್ದರಾಮಯ್ಯ ಅವರಿಗೆ ನೆನಪಿಸುತ್ತೇನೆ. ವಾಲ್ಮೀಕಿ ನಿಗಮದಲ್ಲಿ ೧೮೭ ಕೋಟಿ ರೂ. ಹಗಲು ದರೋಡೆ ನಡೆದಿದೆ. ಇವೆಲ್ಲವೂ ಗೊತ್ತಿಲ್ಲದಂತೆ ಕಿವುಡರು, ಮೂಕರಂತೆ ಸಿಎಂ ಓಡಾಡಬಾರದು. ಕೂಡಲೇ ಸರ್ಕಾರ ಜವಾಬ್ದಾರಿ ಹೊರಬೇಕು. ನಿಷ್ಪಕ್ಷಪಾತ ತನಿಖೆಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.