ಹುಬ್ಬಳ್ಳಿ: ನಗರದ ಡಾಕಪ್ಪ ವೃತ್ತದ ಬಳಿಯ ಮುಲ್ಲಾ ಓಣಿಯ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಾಣಿಜ್ಯನಗರಿಯಲ್ಲಿ ಆತಂಕ ಆವರಿಸಿದೆ. ಲಾಕ್ಡೌನ್ ಇದ್ದರೂ ಸಾಮಾನ್ಯವಾಗಿ ಓಡಾಡಿಕೊಂಡಿದ್ದ ಜನರು ಇದೀಗ ಬೆಚ್ಚಿಬಿದ್ದಿದ್ದಾರೆ.
ಜಿಲ್ಲೆಯ 2ನೇ ಕರೊನಾ ಪಾಸಿಟಿವ್ ಪ್ರಕರಣ ಇದಾಗಿದೆ. 2 ವಾರಗಳ ಹಿಂದೆ ಹೊಸ ಯಲ್ಲಾಪುರದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ಅವರು 3 ದಿನಗಳ ಹಿಂದಷ್ಟೇ ಗುಣಮುಖರಾಗಿದ್ದರಿಂದ ಜಿಲ್ಲೆ ನಿಟ್ಟುಸಿರು ಬಿಟ್ಟಿತ್ತು. ಆದರೆ, ಇದೀಗ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದರಿಂದ ಸಾರ್ವಜನಿಕರಲ್ಲಿ ಆಂತಕ ಮನೆ ಮಾಡಿದೆ. ಈ ವ್ಯಕ್ತಿಗೆ ದೆಹಲಿ ನಂಟು ಇರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಹೊಸ ಪ್ರಕರಣದ ಸೋಂಕಿತ ಪ್ರದೇಶ ಮುಲ್ಲಾ ಓಣಿಯಿಂದ 3 ಕಿ.ಮೀ. ಸುತ್ತಳತೆಯ ವ್ಯಾಪ್ತಿಯಲ್ಲಿ ಬರುವ ಪ್ರದೇಶವನ್ನು ಕಂಟೈನ್ವೆುಂಟ್ ವಲಯ ಎಂದು ಜಿಲ್ಲಾಡಳಿತ ಘೊಷಿಸಿದೆ. ಕಂಟೈನ್ವೆುಂಟ್ ವಲಯದ ವ್ಯಾಪ್ತಿಯು ಶೇ. 80ರಷ್ಟು ಹುಬ್ಬಳ್ಳಿ ನಗರವನ್ನು ಒಳಗೊಂಡಿದೆ. ಸುಮಾರು 1,01,769 ಮನೆಗಳು ಹಾಗೂ 5,71,153 ಜನಸಂಖ್ಯೆ ಸೇರಿದೆ. ಪಾಲಿಕೆಯ 7 ವಲಯ ಕಚೇರಿಗಳು ಹಾಗೂ 36 ವಾರ್ಡ್ಗಳಿಗೆ ವಿಸ್ತರಿಸಿಕೊಂಡಿದೆ.
ರಾಜನಗರದಿಂದ ಅಶೋಕನಗರ, ಶಕ್ತಿ ಕಾಲನಿ, ವಿಜಯನಗರ, ಬೈಲಪ್ಪನವರನಗರ, ಸವಾಯಿ ಗಂಧರ್ವ ಹಾಲ್, ದೇಶಪಾಂಡೆನಗರ, ಕಿತ್ತೂರ ಚನ್ನಮ್ಮ ವೃತ್ತದವರೆಗೆ, ಹೊಸೂರು, ವಿದ್ಯಾನಗರ ಲೋಕಪ್ಪನಹಕ್ಕಲ್, ಶಿರೂರ ಪಾರ್ಕ್, ಲಿಂಗರಾಜನಗರ ಉಣಕಲ್ ಕ್ರಾಸ್ವರೆಗೆ, ಗೋಪನಕೊಪ್ಪದಿಂದ ಬೆಂಗೇರಿ, ಕೇಶ್ವಾಪುರದ ಬದಾಮಿನಗರ, ಮಧುರಾ ಚೇತನಾ ಕಾಲನಿ, ಶಬರಿನಗರದವರೆಗೆ, ಗದಗ ರಸ್ತೆ ರೈಲ್ವೆ ವಸತಿ ಗೃಹಗಳಿಂದ ಗಾಂಧಿವಾಡಾ, ಮಂಟೂರ ರಸ್ತೆವರೆಗೆ, ದೇಶಪಾಂಡೆನಗರ ಪ್ರವಾಸಿ ಮಂದಿರದಿಂದ ದೇಸಾಯಿ ವೃತ್ತ, ಕ್ಲಬ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಕೇಶ್ವಾಪುರ ಹಳೇ ವುಡ್ಲ್ಯಾಂಡ್ ಹೋಟೆಲ್ವರೆಗೆ, ಸ್ಟೇಷನ್ ರಸ್ತೆಯಿಂದ ಗಣೇಶಪೇಟ ಭಾಗಶಃ, ಸಿಬಿಟಿ, ಮರಾಠಗಲ್ಲಿವರೆಗೆ, ಕಮರಿಪೇಟ ತೊರವಿಹಕ್ಕಲದಿಂದ ಕೌಲಪೇಟ, ಬ್ಯಾಲಿ ಓಣಿ, ಅರವಿಂದನಗರ, ಚನ್ನಪೇಟವರೆಗೆ, ಪಿ.ಬಿ. ರಸ್ತೆ, ಕಾರವಾರ ರಸ್ತೆ ಇಂದಿರಾ ಗಾಜಿನಮನೆ ಸಿದ್ಧಾರೂಢಮಠದವರೆಗೆ, ಗೋಕುಲ ರಸ್ತೆ, ಚನ್ಮಮ್ಮ ವೃತ್ತದಿಂದ ಮೂರುಸಾವಿರ ಮಠ, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಮಹಾವೀರಗಲ್ಲಿವರೆಗೆ, ಚನ್ನಮ್ಮ ವೃತ್ತದಿಂದ ಗಬ್ಬೂರ ಕ್ರಾಸ್, ಸುತ್ತಮುತ್ತಲಿನ ಪ್ರದೇಶಗಳು ಕಂಟೈನ್ವೆುಂಟ್ ವಲಯವಾಗಿದೆ.
ಮುಲ್ಲಾ ಓಣಿಯ ಪ್ರದೇಶದಲ್ಲಿ ಪಾಲಿಕೆ ವತಿಯಿಂದ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪರಣೆ ಕಾರ್ಯ ನಡೆಸಲಾಯಿತು. ಕಂಟೈನ್ನೆಂಟ್ ವಲಯದಲ್ಲಿ ಮುಂದಿನ ಆದೇಶದವರೆಗೆ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ತಪಾಸಣೆ ಕಾರ್ಯ ಹಂತ ಹಂತವಾಗಿ ನಡೆಸಲಿದೆ. ಮೊದಲು 1 ಕಿ.ಮೀ. ಸುತ್ತಳತೆಯ ಪ್ರದೇಶಕ್ಕೆ ಪಾಲಿಕೆ ಆದ್ಯತೆ ನೀಡಲಿದೆ. ಪೊಲೀಸ್ರು ಬಿಗಿ ಬಂದೋಬಸ್ತ್ ವ್ಯವಸ್ತೆ ಮಾಡಿದ್ದಾರೆ. ಜನರ ಓಡಾಟ ಸ್ತಬ್ಧವಾಗಲಿದೆ.
ಜನರ, ವಾಹನ ಸಂಚಾರ ನಿರ್ಬಂಧ
ಕಂಟೈನ್ವೆುಂಟ್ ವಲಯದ ನಿವಾಸಿಗಳು ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕೆಂದು ಜಿಲ್ಲಾಡಳಿತ ಸೂಚಿಸಿದೆ. ಇಲ್ಲಿಗೆ ಹೊರಗಿನಿಂದ ಬರುವವರನ್ನು ಹಾಗೂ ಇಲ್ಲಿಂದ ಹೊರಗೆ ಹೋಗುವವರನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕರ್ತವ್ಯ ನಿರತ ಹಾಗೂ ಸರಕು ಸಾಗಣಿಕೆ ವಾಹಗಳನ್ನು ಹೊರತು ಪಡಿಸಿ ಉಳಿದೆಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. 3 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆಯವರು ಆಹಾರ ಮತ್ತು ಇತರೇ ವಸ್ತುಗಳನ್ನು ಜನರಿಗೆ ವಿತರಿಸುವಂತಿಲ್ಲ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ದೆಹಲಿಯಿಂದ ಹುಬ್ಬಳ್ಳಿಗೆ ಕರೊನಾ ನಂಟು
ಮುಲ್ಲಾ ಓಣಿಯ ಕರೊನಾ ಸೋಂಕಿತ ವ್ಯಕ್ತಿಗೆ (ಪಿ-194) ದೆಹಲಿ ನಂಟಿದ್ದು, ಅವರ ಮೂಲಕ ಹುಬ್ಬಳ್ಳಿಗೆ ಪ್ರವೇಶಿಸಿದೆ. ವ್ಯಕ್ತಿ ಪ್ರಯಾಣದ ವಿವರವನ್ನು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿ ತನ್ನ ಸಹೋದರನೊಂದಿಗೆ ಮಾ. 16ರಂದು ಖಾಸಗಿ ವಾಹನದಲ್ಲಿ ಹುಬ್ಬಳ್ಳಿಯಿಂದ ಹೈದರಾಬಾದ್ಗೆ ತೆರಳಿದ್ದು, ಮಾ. 17ರಂದು ಬೆಳಗ್ಗೆ 5.30ಕ್ಕೆ ತಲುಪಿದ್ದರು. ಅಲ್ಲಿಂದ ಬೆಳಗ್ಗೆ 8.45ಕ್ಕೆ ವಿಮಾನದ ಮೂಲಕ ಬೆಳಗ್ಗೆ 10.55ಕ್ಕೆ ದೆಹಲಿಗೆ ಹೋಗಿದ್ದರು. ಅಲ್ಲಿ ವ್ಯವಹಾರ ಮುಗಿಸಿ ವಾಸ್ತವ್ಯ ಹೂಡಿದ್ದರು.
ಮಾ. 18ರಂದು ಬೆಳಗ್ಗೆ 5.45ಕ್ಕೆ ದೆಹಲಿಯಿಂದ ಹೊರಟು 9 ಗಂಟೆಗೆ ಆಗ್ರಾ ತಲುಪಿದ್ದರು. ಅದೇ ದಿನ ಸಂಜೆ ಅಲ್ಲಿಂದ 5.45ಕ್ಕೆ ಗೋಮತಿ ಎಕ್ಸ್ಪ್ರೆಸ್ ರೈಲ್ವೆ ಮೂಲಕ ಸಂಜೆ 7 ಗಂಟೆಗೆ ದೆಹಲಿಗೆ ಹೋಗಿದ್ದರು. ಮಾ. 19ರಂದು ಏರ್ಏಷಿಯಾ ವಿಮಾನದ ಮೂಲಕ ಬೆಳಗ್ಗೆ 5.50ಕ್ಕೆ ದೆಹಲಿ ಬಿಟ್ಟು 8.30ಕ್ಕೆ ಮುಂಬೈ ತಲುಪಿದ್ದರು. ಅದೇ ದಿನ ರಾತ್ರಿ 9 ಗಂಟೆಗೆ ಖಾಸಗಿ ವಾಹನದಲ್ಲಿ ಮಾ. 20ರಂದು ಬೆಳಗ್ಗೆ 8ಕ್ಕೆ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣಕ್ಕೆ ಆಗಮಿಸಿ ಆಟೋ ಮೂಲಕ ಕಮರಿಪೇಟೆ ಮುಲ್ಲಾ ಓಣಿಯ ತಮ್ಮ ನಿವಾಸಕ್ಕೆ ತೆರಳಿದ್ದರು.
ಈ ವ್ಯಕ್ತಿ ಏ. 2ರಂದು ಕಿಮ್ಸ್ಗೆ ದಾಖಲಾಗಿದ್ದು, ನೆಗೆಟಿವ್ ವರದಿ ಬಂದಿದ್ದರಿಂದ ಏ. 5ರಂದು ಬಿಡುಗಡೆಯಾಗಿದ್ದರು. ವ್ಯಕ್ತಿಯ ಸಂಶಯದ ಆಧಾರದ ಮೇಲೆ ಏ. 6ರಂದು ಖಾಸಗಿ ಹೋಟೆಲೊಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ವ್ಯಕ್ತಿ ಪ್ರಯಾಣಿಸಿದ ಬಸ್, ವಿಮಾನ, ಆಟೋ ಹಾಗೂ ಸಹ ಪ್ರಯಾಣಿಕರು, ವ್ಯಕ್ತಿ ವಾಸ್ತವ್ಯದ ಸುತ್ತಲಿನ ಪ್ರದೇಶದ ಸಾರ್ವಜನಿಕರಿಗೂ ಸೋಂಕು ತಗಲುವ ಸಾಧ್ಯತೆ ಇದೆ. ಹಾಗಾಗಿ ಕೂಡಲೇ 104/1077 ಸಹಾಯವಾಣಿಗೆ ಸಂರ್ಪಸಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.
21 ಜನರ ವೈದ್ಯಕೀಯ ವರದಿ ಬಾಕಿ
ಧಾರವಾಡ: ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಮಹಾಮಾರಿ ಕರೊನಾ ಸೋಂಕು ದೂರವಾಯಿತು ಎನ್ನುವಷ್ಟರಲ್ಲೇ ಹುಬ್ಬಳ್ಳಿಯ ವ್ಯಕ್ತಿಯೊಬ್ಬನಲ್ಲಿ ಕರೋನಾ ಪಾಸಿಟಿವ್ ಗುಣಲಕ್ಷಣ ಕಾಣಿಸಿದೆ. ಜೊತೆಗೆ 21 ಜನರ ವೈದ್ಯಕೀಯ ವರದಿ ಬರಬೇಕಿದ್ದು, ಮತ್ತಷ್ಟು ದುಗುಡಕ್ಕೆ ಕಾರಣವಾಗಿದೆ.
ಕರೊನಾ ಸೋಂಕು ಇರುವ ಶಂಕೆ ಹಿನ್ನೆಲೆಯಲ್ಲಿ ಬುಧವಾರದವರೆಗೆ 754 ಜನರ ಮೇಲೆ ನಿಗಾ ವಹಿಸಲಾಗಿತ್ತು. ಇದಕ್ಕೆ ಮತ್ತೆ 18 ಜನ ಸೇರ್ಪಡೆಯಾಗಿದ್ದು, ಗುರುವಾರ ಸಂಜೆ ವೇಳೆಗೆ 772ಕ್ಕೆ ಏರಿಕೆಯಾಗಿದೆ. ವೈರಸ್ ಹರಡುವ ಭೀತಿ ತಡೆಗೆ ವಿದೇಶಗಳಿಂದ ಆಗಮಿಸಿದವರು, ಅಂತಾರಾಜ್ಯ ಪ್ರವಾಸ ಮಾಡಿದ ಶಂಕಿತರು, ಅವರ ಸಂಪರ್ಕಕ್ಕೆ ಒಳಗಾದವರು ಸೇರಿ 772 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.
ಓಣಿ ತುಂಬೆಲ್ಲ ಹೈ ಅಲರ್ಟ್
ಹುಬ್ಬಳ್ಳಿ: ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಇಲ್ಲಿನ ಮುಲ್ಲಾ ಓಣಿಯ ತುಂಬೆಲ್ಲ ಹೈ ಅಲರ್ಟ್ ಘೊಷಿಸಲಾಗಿದೆ.
ಉಪ ವಿಭಾಗಾಧಿಕಾರಿ ಅಹ್ಮದ್ ಜುಬೇರ್ ನೇತೃತ್ವದಲ್ಲಿ ತಹಸೀಲ್ದಾರ್ಗಳಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ ಅವರು ಇಡೀ ಬಡಾವಣೆ ತುಂಬೆಲ್ಲ ಓಡಾಡಿ ಮನೆಯಿಂದ ಯಾರೂ ಹೊರಗಡೆ ಬರಬೇಡಿ ಎಂದು ವಿನಂತಿಸಿದರು. ಈಗಾಗಲೇ ಈ ಬಡಾವಣೆಯ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ತಗುಲಿದ್ದು, ಎಚ್ಚರಿಕೆಯಿಂದ ಇರಬೇಕು ಎಂದು ಕಟ್ಟುನಿಟ್ಟಿನ ಸಂದೇಶವನ್ನು ರವಾನಿಸಿದರು.
ಇದುವರೆಗೆ 267 ಜನರ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೊಳಪಡಿಸಲಾಗಿದೆ. 245 ಜನರ ವರದಿಗಳು ನೆಗೆಟಿವ್ ಬಂದಿದ್ದು, 1 ಪ್ರಕರಣದಲ್ಲಿ ಪಾಸಿಟಿವ್ ಕಂಡುಬಂದಿದೆ. ಪ್ರಯೋಗಾಲಯದಿಂದ 21 ಜನರ ವೈದ್ಯಕೀಯ ವರದಿ ಬರಬೇಕಿದೆ. 137 ಜನರಿಗೆ 14 ದಿನಗಳ ಹೋಂ ಐಸೋಲೇಷನ್ ವಿಧಿಸಲಾಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕ ಐಸೋಲೇಷನ್ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. 299 ಜನ 14 ದಿನಗಳ ಹಾಗೂ 331 ಜನ 28 ದಿನಗಳ ಪ್ರತ್ಯೇಕ ವಾಸ ಮುಗಿಸಿದ್ದಾರೆ.