ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಾಕಾರಕ್ಕೆ ಇಲಾಖೆ ಎದುರು ನೋಡುತ್ತಿದ್ದು, ಸರ್ಕಾರದ ಹಸಿರು ನಿಶಾನೆಯ ನಿರೀಕ್ಷೆಯಲ್ಲಿದೆ.
ಜಿಲ್ಲೆಯ ಜನವಸತಿ ಪ್ರದೇಶಗಳಲ್ಲಿ ಶುದ್ಧ ನೀರು ಪೂರೈಸುವ ಯೋಜನೆಗೆ ದೊಡ್ಡಬಳ್ಳಾಪುರ ತಾಲೂಕಿನ ಕೆಲವು ಕೆರೆಗಳನ್ನು ಆಯ್ಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಎಲ್ಲ ತಾಲೂಕುಗಳಿಗೂ ಯೋಜನೆ ವಿಸ್ತರಿಸುವ ಚಿಂತನೆ ಇದೆ. ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಹಸಿರು ನಿಶಾನೆ ದೊರೆತರೆ ವರ್ಷದ ಅವಧಿಯಲ್ಲಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ತುಂಬಿದ ಕೆರೆಗಳಿಂದ ನೀರು ಪೂರೈಕೆ: ಜಿಲ್ಲೆಯ ಕೆಲವೊಂದು ಕೆರೆಗಳು ತುಂಬಿವೆ. ಇಂಥ ಕೆರೆಗಳನ್ನು ಆಯ್ಕೆ ಮಾಡಿ ಮಳೆನೀರನ್ನು ಶುದ್ಧೀಕರಿಸಿ ಪೈಪ್‌ಲೈನ್‌ಗಳ ಮೂಲಕ ಮನೆಮನೆಗೆ ತಲುಪಿಸುವ ಯೋಜನೆ ಇದಾಗಿದೆ.
ಶಾಶ್ವತ ನೀರಾವರಿಯಿಂದ ಮತ್ತಷ್ಟು ಅನುಕೂಲ: ಏತನೀರಾವರಿ ಯೋಜನೆ ಮೂಲಕ ಈಗಾಗಲೇ ಜಿಲ್ಲೆಯ ಕೆಲವೊಂದು ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಬಿರುಸುಗೊಂಡಿದೆ. ಇಂಥ ಕೆರೆಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊಳವೆಬಾವಿಗಳಿಂದ ನೀರು ಪಡೆದು ಶುದ್ಧೀಕರಿಸಿ ಪೈಪ್‌ಲೈನ್ ಮೂಲಕ ಕುಡಿವ ನೀರು ಪೂರೈಸಲು ಅನುಕೂಲವಾಗಲಿದೆ. ವರ್ಷಪೂರ್ತಿ ಕೆರೆ ತುಂಬಿರುವುದರಿಂದ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿರುತ್ತದೆ. ವರ್ಷಪೂರ್ತಿ ಮನೆಗಳಿಗೆ ಶುದ್ಧ ನೀರು ಪೂರೈಸಲು ಸಹಕಾರಿಯಾಗುತ್ತದೆ ಎನ್ನುವುದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಜಿಲ್ಲೆಗೆ ಪೂರಕ: ಅಂತರ್ಜಲವನ್ನೇ ನಂಬಿರುವ ಜಿಲ್ಲೆಯ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದಾದ ಬಹುಗ್ರಾಮ ಕುಡಿಯುವ ನೀರು ಯೋಜನೆಗಳಿಗೆ ಸರ್ಕಾರ ತ್ವರಿತವಾಗಿ ಸ್ಪಂದಿಸದಿದ್ದರೆ ಬೇಸಿಗೆಯಲ್ಲಿ ಹಾಹಾಕಾರ ಎದುರಾಗಲಿದೆ. ಕುಡಿಯುವ ನೀರಿಗೆ ಕೊಳವೆಬಾವಿಗಳನ್ನೇ ಆಶ್ರಯಿಸಿರುವ ಹಳ್ಳಿಗಳಿಗೆ ಕೆರೆಗಳ ಮೂಲಕ ನೀರು ಪೂರೈಸುವ ಈ ಯೋಜನೆಗೆ ಸರ್ಕಾರ ತ್ವರಿತವಾಗಿ ಸ್ಪಂದಿಸಲಿದೆಯೇ ಎಂಬ ನಿರೀಕ್ಷೆಯಲ್ಲಿ ಗ್ರಾಮೀಣ ಜನರಿದ್ದಾರೆ.
2 ಕೆರೆಗಳ ಆಯ್ಕೆ: ಪ್ರಾಥಮಿಕವಾಗಿ ಈ ಯೋಜನೆಯಡಿ ದೊಡ್ಡಬಳ್ಳಾಪುರ ತಾಲೂಕಿನ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ‘ಗುಂಡಮನಕೆರೆ’ ಹಾಗೂ ಜಿಪಂ ವ್ಯಾಪ್ತಿಯ ‘ಗೌಡನಕೆರೆ’ಗಳನ್ನು ಆಯ್ಕೆ ಮಾಡಲಾಗಿದೆ. ಸರ್ಕಾರದಿಂದ ಹಸಿರು ನಿಶಾನೆ ದೊರೆತರೆ ಟೆಂಟರ್ ಪ್ರಕ್ರಿಯೆ ಪೂರೈಸಿ ಸುಮಾರು 1760 ಮನೆಗಳಿಗೆ ಶುದ್ಧ ನೀರು ಪೂರೈಕೆಯಾಗಲಿದೆ. ಇದರ ಜತೆಜತೆಗೆ ನೆಲಮಂಗಲದ ಐದು ದೊಡ್ಡಕೆರೆಗಳನ್ನು ಗುರುತಿಸಿದ್ದು ಈ ಯೋಜನೆಯಡಿ ಐದು ಕೆರೆಗಳನ್ನು ಬಳಸುವ ಸಂಬಂಧ ರೂಪುರೇಷೆ ಸಿದ್ಧಪಡಿಸಲಾಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದ ಹಸಿರು ನಿಶಾನೆಯ ನಿರೀಕ್ಷೆಯಲ್ಲಿದ್ದೇವೆ, ವರ್ಷದ ಕಾಲಾವಧಿಯಲ್ಲಿ ಯೋಜನೆ ಅನುಷ್ಠಾನಗೊಂಡು ಮನೆಗಳಿಗೆ ಪೈಪ್‌ಲೈನ್ ಮೂಲಕ ನೀರು ಪೂರೈಸಲು ಸಿದ್ಧತೆ ನಡೆದಿದೆ. ಸವಿತಾ, ಕಾರ್ಯಪಾಲಕ ಅಭಿಯಂತ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ