ಬೆಳಗಾವಿ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ರಾಜೇಂದ್ರ ಸಣ್ಣಕ್ಕಿ ಮಾತನಾಡಿದರು. ಲಕ್ಷ$್ಮಣರಾವ ಚಿಂಗಳೆ, ರಾಜಶೇಖರ ತಳವಾರ, ಮಲ್ಲೇಶ ಚೌಗುಲೆ ಇತರರಿದ್ದರು. 
ಜಿಲ್ಲೆ

ಬಹು ಸಂಖ್ಯಾತರೆಂದು ಹೇಳಿಕೊಳ್ಳುವವರ ಬೆದರಿಕೆಗೆ ಹೆದರಬೇಡಿ: ಡಾ.ರಾಜೇಂದ್ರ ಸಣ್ಣಕ್ಕಿ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ರಾಜ್ಯದಲ್ಲಿ ಬಹು ಸಂಖ್ಯಾತರೆಂದು ಹೇಳಿಕೊಳ್ಳುತ್ತಿರುವ ಲಿಂಗಾಯತ, ಒಕ್ಕಲಿಗರ ಗೊಡ್ಡು ಬೆದರಿಕೆಗಳಿಗೆ ಸರ್ಕಾರ ಹೆದರುವ ಅವಶ್ಯಕತೆ ಇಲ್ಲ. ಸರ್ಕಾರವು ಕೂಡಲೇ ಎಚ್​.ಕಾಂತರಾಜು, ಜಯಪ್ರಕಾಶ ಹೆಗಡೆ ವರದಿಯನ್ನು ಯಥಾವತ್ತಾಗಿ ಅಂಗೀಕರಿಸಬೇಕು ಎಂದು ರಾಜ್ಯ ಹಿಂದುಳಿದ ಜಾತಿಗಳ ಮತ್ತು ಶೋಷಿತ ಸಮುದಾಯದ ಒಕ್ಕೂಟದ ಮುಖಂಡ ಡಾ.ರಾಜೇಂದ್ರ ಸಣ್ಣಕ್ಕಿ ಆಗ್ರಹಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್​.ಕಾಂತರಾಜು, ಜಯಪ್ರಕಾಶ ಹೆಗಡೆ ವರದಿ ವಿರೋಧಿಸುತ್ತಿರುವ ವೀರಶೈವ ಲಿಂಗಾಯತರು, ಒಕ್ಕಲಿಗರು ಮೀಸಲಾತಿಗಾಗಿ ಬೇರೆ ಜಾತಿ, ಧಾರ್ಮಿಕ, ರಾಜಕೀಯ ಲಾಭಕ್ಕಾಗಿ ಇನ್ನೊಂದು ಜಾತಿ ಹೆಸರು ಹೇಳಿಕೊಳ್ಳುವುದನ್ನು ಮೊದಲು ನಿಲ್ಲಿಸಿ. 70 ವರ್ಷಗಳಿಂದ ನಿಮ್ಮ ದರ್ಪ ಸಹಿಸಿಕೊಂಡು ಬಂದಿದ್ದು, ಇನ್ನೂ ಮುಂದೆ ಗೊಡ್ಡು ಬೆದರಿಕೆಗಳಿಗೆ ನಾವು ಹೆರದುವುದಿಲ್ಲ. ನಿಮ್ಮನ್ನು ಹೊರಗಿಟ್ಟು ಚುನಾವಣೆಯಲ್ಲಿ ಗೆಲ್ಲುವಷ್ಟು ಜನಸಂಖ್ಯೆ ಹೊಂದಿದ್ದೇವೆ ಎಂದರು.

ಎಚ್​.ಕಾಂತರಾಜು, ಜಯಪ್ರಕಾಶ ಹೆಗಡೆ ಸಮೀಕ್ಷೆ ವರದಿಯಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಲು ಅವಕಾಶವಿದೆ. ಹೀಗಾಗಿ ಮೊದಲು ಎಲ್ಲ ಜಾತಿ, ಜನಾಂಗದವರು ವರದಿ ಒಪ್ಪಿಕೊಳ್ಳಬೇಕು. ವರದಿಯಲ್ಲಿ ಸತ್ಯಾಂಶ ತಿಳಿದುಕೊಳ್ಳದೇ ನಾವು ಬಹುಸಂಖ್ಯಾತರು ಎಂದು ಹೇಳಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಬುಡಾ ಅಧ್ಯಕ್ಷ ಲಕ್ಷ$್ಮಣರಾವ್​ ಚಿಂಗಳೆ ಮಾತನಾಡಿ, ಎಚ್​.ಕಾಂತರಾಜು, ಜಯಪ್ರಕಾಶ ಹೆಗಡೆ ಸಮೀಕ್ಷೆ ವರದಿಯನ್ನು ಸರ್ಕಾರ ಬಹಿರಂಗ ಪಡಿಸಬೇಕು. 160 ಕೋಟಿ ರೂ. ಖರ್ಚು ಮಾಡಿ ವರದಿ ಅನುಷ್ಠಾನಗೊಳಿಸದೇ ಹಾಗೆ ಬಿಡುವುದು ತಪ್ಪು. ಕೂಡಲೇ ವರದಿ ಒಪ್ಪಿಕೊಳ್ಳಬೇಕು. ಸುಪ್ರೀಂ ಕೋರ್ಟ್​ ಕೂಡ ಸಮೀಕ್ಷಾ ವರದಿ ಅನುಷ್ಠಾನಗೊಳಿಸಲು ನಿರ್ದೇಶನ ನೀಡುತ್ತ ಬರುತ್ತಿವೆ. ವರದಿಯಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ನೀಡಿ. ಯಾವುದೇ ಕಾರಣಕ್ಕೂ ಮರು ಸಮೀಕ್ಷೆ ನಡೆಸಲು ಅವಕಾಶ ನೀಡಬೇಡಿ ಎಂದು ವಿನಂತಿಸಿದರು. ರಾಜಶೇಖರ ತಳವಾರ, ದಲಿತ ಸಂಟನೆಗಳ ಒಕ್ಕೂಟದ ಮುಖಂಡ ಮಲ್ಲೇಶ ಚೌಗುಲೆ ಮಾತನಾಡಿದರು.