ಹೊಳೆನರಸೀಪುರ: ನನ್ನ ಬಹು ವರ್ಷದ ಕನಸು ಇಂದು ನಮ್ಮ ಟ್ರಸ್ಟ್ ಮೂಲಕ ಈಡೇರುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದು ಹಾಸನ ಅಬಕಾರಿ ಜಿಲ್ಲಾ ಅಧಿಕಾರಿ ನಾಗೇಶ್ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಕಾಲುವೆ ಕೆರೆ ಬೀದಿಯಲ್ಲಿ ಶ್ರೀಮತಿ ವೆಂಕಟಲಕ್ಷ್ಮಮ್ಮ ಮತ್ತು ಆರ್.ದಾಸಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ತೆರೆದಿರುವ ವೃದ್ಧಾಶ್ರಮ ಹಾಗೂ ಅನಾಥಾಶ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಮೈಸೂರಿನಲ್ಲಿ ಅಬಕಾರಿ ಅಧಿಕಾರಿ ಆಗಿದ್ದ ವೇಳೆ ಶ್ರೀರಂಗಪಟ್ಟಣದಲ್ಲಿ ಆರಂಭಗೊಂಡಿದ್ದ ವೃದ್ಧಾಶ್ರಮ ಮತ್ತು ಅನಾಥ ನಿಲಯವನ್ನು ಕಂಡು ನಾನೂ ಅದರಲ್ಲಿ ಭಾಗಿಯಾಗಿ ಅಷ್ಟಿಷ್ಟು ಸಹಕಾರ ನೀಡುತ್ತಿದ್ದೆ, ತದ ನಂತರ ಆತ್ಮೀಯರೊಡನೆ ಸೇರಿ ಇಂತಹ ವೃದ್ಧಾಶ್ರಮ ಮತ್ತು ಅನಾಥಾಶ್ರಮವನ್ನು ಏಕೆ ಆರಂಭಿಸಬಾರದು ಎಂಬ ಬಗ್ಗೆ ಯೋಚನೆ ಮಾಡಿ ನನ್ನ ಮಾತಾಪಿತೃಗಳ ಹೆಸರಿನಲ್ಲಿ ಆರಂಭಿಸಿ ಇಂದು ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಅದಕ್ಕಾಗಿ 2013ರಲ್ಲಿ ಟ್ರಸ್ಟ್ ಆರಂಭಿಸಿದ್ದು, ಅದರ ಮೂಲಕ ಇಂದು ವೃದ್ಧಾಶ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಆರಂಭದಲ್ಲಿ ಹತ್ತು ಜನ ವೃದ್ಧರು ನೋಂದಣಿ ಆಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ನೂತನ ಆಶ್ರಮ ಕಟ್ಟಡದಲ್ಲಿ ಗಣಪತಿ ಹೋಮವನ್ನು ವಿಧ್ಯುಕ್ತವಾಗಿ ನೆರವೇರಿಸಿದ ನಂತರ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತು. ಇದೇ ಸಂದರ್ಭದಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನದಲ್ಲಿ ಆರು ಗೀತೆಗಳನ್ನು ಹಾಡಲಾಯಿತು.
ಹೊಳೆನರಸೀಪುರದ ಕಾಲುವೇ ಕೆರೆ ಬೀದಿಯಲ್ಲಿ ಶ್ರೀಮತಿ ವೆಂಕಟಲಕ್ಷ್ಮಮ್ಮ ಮತ್ತು ಆರ್.ದಾಸಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ವೃದ್ಧಾಶ್ರಮ ಹಾಗೂ ಅನಾಥಾಶ್ರಮವನ್ನು ಹಾಸನ ಅಬಕಾರಿ ಜಿಲ್ಲಾ ಅಧಿಕಾರಿ ನಾಗೇಶ್ ಉದ್ಘಾಟಿಸಿ ಮಾತನಾಡಿದರು. ಮಂಜುನಾಥ್, ಬಿ.ಸೋಮಶೇಖರ್ ಮತ್ತಿತರರಿದ್ದರು.