ಬಾಗಲಕೋಟೆ: ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಶಾಸಕ ಬಸನಗೌಡ ಪಾಟೀಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬಣಜಿಗ ಸಮಾಜಕ್ಕೆ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬಣಜಿಗ ಕ್ಷೆಮಾಭಿವೃದ್ಧಿ ಸಂಘ ಬಾಗಲಕೋಟೆ ತಾಲೂಕಾ ಘಟಕ ನೇತೃತ್ವದಲ್ಲಿ ನಗರದ ಬಸವೇಶ್ವರದಲ್ಲಿ ಶನಿವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಆಗಮಿಸಿದ ಬಣಜಿಗ ಸಮಾಜದ ಮುಖಂಡರು, ಯುವಕರು ಶಾಸಕ ಬಸನಗೌಡ ಪಾಟೀಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅವರ ಭಾವಚಿತ್ರ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಬಣಜಿಗ ಕ್ಷೆಮಾಭಿವೃದ್ಧಿ ಸಂಘದ ಬಾಗಲಕೋಟೆ ತಾಲೂಕಾ ಅಧ್ಯಕ್ಷ ಬಸವರಾಜ ಶೀಲವಂತ ಮಾತನಾಡಿ, ಅಣ್ಣ ಬಸವಣ್ಣ ಹಾದಿಯಲ್ಲಿ ನಮ್ಮ ಸಮಾಜ ಬಾಂಧವರು ಬದುಕುತ್ತಿದ್ದಾರೆ. ಮೀಸಲಾತಿ ಹೋರಾಟಕ್ಕೆ ನಮ್ಮ ವಿರೋಧವಿಲ್ಲ. ಮಾನವೀಯತೆ ಬದುಕು ಸಮಾಜದಲ್ಲಿ ಒಳಪಂಗಡಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಬಸನಗೌಡ ಪಾಟೀಲ(ಯತ್ನಾಳ), ವಿಜಯಾನಂದ ಕಾಶಪ್ಪನವರ ಬಿಡಬೇಕು. ಇಬ್ಬರು ನಾಯಕರು ಇಲ್ಲ ಸಲ್ಲದ ಹೇಳಿಕೆಗಳನ್ನು ಕೊಟ್ಟು ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಎಲ್ಲ ಸಮಾಜದವರು ಬೆಂಬಲಿಸಿದಾಗ ಶಾಸಕರಾಗಿದ್ದಾರೆ ಎನ್ನುವ ಅರಿವು ಇವರಿಗೆ ಇರಬೇಕು. ಒಂದು ಸಮಾಜವನ್ನು ಗುರಿಯಾಗಿಸಿ ನಿಂದನೆ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ರವಿ ಕುಮಟಗಿ ಮಾತನಾಡಿ, ಪಂಚಮಸಾಲಿ -ಬಣಜಿಗ ಸಮಾಜವು ನೂರಾರು ವರ್ಷಗಳಿಂದ ಉತ್ತಮ ಸಂಬಂಧ ಹೊಂದಿದೆ. ಆದರೇ ವಿಜಯಾನಂದ ಕಾಶಪ್ಪನವರ, ಬಸನಗೌಡ ಪಾಟೀಲ ಅವಹೇಳನ ಮಾಡುತ್ತಿದ್ದಾರೆ. ಸಮಾಜದ ನಡುವೆ ಬಿರುಕು ಮೂಡಿಸುತ್ತಿದ್ದಾರೆ. ಬೀದಿ ನಾಯಿಗಳ ರೀತಿ ಬೊಗಳುತ್ತಾ ಓಡುತ್ತಿದ್ದಾರೆ. ನಿಮಗೆ ತಾಕತ್ತು ಇದ್ದರೇ ಬಣಜಿಗ ಸಮಾಜದ ವೋಟು ಬೇಡ ಹೇಳಲಿ ಎಂದು ಸವಾಲು ಹಾಕಿದ ಅವರು, ಬೆಳಗಾವಿ ಜಿಲ್ಲೆಯ ಪೊಲೀಸರು ಈ ಇಬ್ಬರು ನಾಯಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಬಹಿರಂಗವಾಗಿ ಕ್ಷೆಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ವಿಶ್ವನಾಥ ವೈಜಾಪುರ, ಶಿವಕರಣ ಯಾದವಾಡ, ಮುರುಗೇಶ ಶಿವನಗುತ್ತಿ, ಬಸವರಾಜ ಚಿನಿವಾಲರ, ಮುತ್ತು ಜೋಳದ, ಪ್ರಭು ವೈಜಾಪುರ, ನಾಗರಾಜ ಹದ್ಲಿ, ಆನಂದ ಜಿಗಜಿನ್ನಿ, ಮಲ್ಲಿಕಾರ್ಜುನ ತಪಶೆಟ್ಟಿ ಇದ್ದರು.