ಬೀದರ್: ಭಾಲ್ಕಿ ವಸತಿ ಯೋಜನೆ ಸೇರಿ ವಿವಿಧ ವಿಷಯಗಳ ಕುರಿತು ಸಂಸದ ಭಗವಂತ ಖೂಬಾ ಹಾಕಿದ ಬಹಿರಂಗ ಚರ್ಚೆ ಸವಾಲನ್ನು ಭಾಲ್ಕಿ ಶಾಸಕರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸ್ವೀಕರಿಸಿದ್ದಾರೆ. ನ.5ರಂದು ಬೀದರ್ ನಗರದಲ್ಲೇ ಸಾರ್ವಜನಿಕವಾಗಿ ಚರ್ಚೆಗೆ ದಿನಾಂಕವೂ ನಿಗದಿಪಡಿಸಿದ್ದಾರೆ.
ಸಂಸದರ ಸವಾಲನ್ನು ಸ್ವೀಕರಿಸಿದ್ದೇನೆ. ನ.5ರಂದು ಬೆಳಗ್ಗೆ 11ಕ್ಕೆ ನಗರದ ಗಣೇಶ ಮೈದಾನ ಅಥವಾ ರಂಗಮಂದಿರದಲ್ಲಿ ಬಹಿರಂಗ ಚರ್ಚೆಗೆ ಮುಹೂರ್ತ ಫಿಕ್ಸ್ ಮಾಡಿದ್ದೇನೆ. ಸಾರ್ವಜನಿಕರ ಹಾಗೂ ವಸತಿ ಯೋಜನೆ ಫಲಾನುಭವಿಗಳ ಸಮ್ಮುಖದಲ್ಲಿ ಚರ್ಚೆ ನಡೆಸಲಾಗುತ್ತದೆ. ವಸತಿ ಯೋಜನೆ ಇತ್ಯಾದಿ ವಿಷಯ ಬಗ್ಗೆ ಮುಕ್ತವಾಗಿ ಚರ್ಚೆಗೆ ಸಿದ್ಧನಿರುವೆ. ಅಂದು ಸರಿಯಾದ ಸಮಯಕ್ಕೆ ನಾನು ಸ್ಥಳದಲ್ಲಿ ಹಾಜರಿರುವೆ. ಧೈರ್ಯವಿದ್ದರೆ ಚರ್ಚೆಗೆ ಬರಲಿ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಪಂಥಾಹ್ವಾನ ನೀಡಿದರು.
ಸುಳ್ಳು ಹೇಳುವುದರಲ್ಲಿ ಖೂಬಾ ನಿಸ್ಸೀಮರು. ಅವರಿಗೆ ಅಭಿವೃದ್ಧಿ ಬೇಕಿಲ್ಲ. ಬರೀ ಸೇಡಿನ ರಾಜಕಾರಣದಲ್ಲಿ ತಲ್ಲೀನರಾಗಿದ್ದಾರೆ. ಅತಿವೃಷ್ಟಿ, ಪ್ರವಾಹದಿಂದ ಜಿಲ್ಲೆ ಜನ ತತ್ತರಿಸಿದ್ದಾರೆ. ರೈತರು ಕಂಗಾಲಾಗಿದ್ದಾರೆ. ಆದರೆ ಸಂಸದರು ತೆಪ್ಪಗೆ ಕುಳಿತಿದ್ದಾರೆ. ಮತ ನೀಡಿ ಗೆಲ್ಲಿಸಿದವರ ನೋವಿಗೆ ಸ್ಪಂದಿಸುತ್ತಿಲ್ಲ. ರಾಜ್ಯ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪರಿಹಾರಕ್ಕೂ ಆಗ್ರಹಿಸದೆ ಜಿಲ್ಲೆ ಜನರಿಗೆ ದ್ರೋಹ ಬಗೆದಿದ್ದಾರೆ. ವರಿಷ್ಠರ ಜತೆಗೆ ಮಾತನಾಡಲು ಧೈರ್ಯವಿರದ ಪುಕ್ಕ, ಅಂಜಬುರುಕ ಸಂಸದ. ಪಟ್ಟಭದ್ರ ಹಿತಾಸಕ್ತಿಗಳ ಜೀತದಾಳುಗಳಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ 100 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಸಂಸದರು ಹೇಳುತ್ತಿದ್ದಾರೆ. ಎಲ್ಲಿವೆ ಆ ಹಣ? ಯಾವಾಗ ಬಿಡುಗಡೆ ಮಾಡಿದ್ದಾರೆ ಎಂದು ಪ್ರಶ್ನಿಸಿದ ಖಂಡ್ರೆ, ಖೂಬಾ ಸಾಧನೆ ಶೂನ್ಯ. ಬಹಿರಂಗ ಚರ್ಚೆಗೆ ಖೂಬಾ ಜತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಂದರೂ ಸ್ವಾಗತ ಎಂದರು.
ಕೇಂದ್ರದ ಸಿಪೆಟ್ ಕೇಂದ್ರ ಬೀದರ್ ನಿಂದ ಬೇರೆ ಜಿಲ್ಲೆಗೆ ಸ್ಥಳಾಂತರವಾಗುತ್ತಿದೆ. ಖೂಬಾ ಏಕೆ ಚಕಾರವೆತ್ತಿಲ್ಲ? ಎಫ್ಎಂ ರೇಡಿಯೋ ಬಗ್ಗೆ ಈವರೆಗೆ ಬರೀ ರೀಲು ಬಿಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಶೈಕ್ಷಣಿಕ ಸಾಲ ಸಿಗುತ್ತಿಲ್ಲ. ರೈತರಿಗೆ ಬೆಳೆ ಸಾಲ ಕೊಡುತ್ತಿಲ್ಲ. ಇವರೇನು ನಿದ್ರೆ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದರು.
ಜಿಲ್ಲಾ ಪಂಚಾಯಿತಿಯಲ್ಲೂ ಬಿಜೆಪಿಯವರು ಆಪರೇಷನ್ ಕಮಲ ನಡೆಸಿದ್ದಾರೆ. ಪ್ರಜಾಪ್ರಭುತ್ವದ ಕೊಲೆ ಮಾಡಿ ಹಿಂಬಾಗಿಲಿನಿಂದ ಅಧಿಕಾರ ಪಡೆಯುವ ಕೆಲಸ ಬಿಜೆಪಿಯವರು ಮಾಡುತ್ತಲೇ ಇದ್ದಾರೆ. ಪಕ್ಷದ ವಿರುದ್ಧ ನಡೆದುಕೊಂಡ ಸದಸ್ಯರ ವಿರುದ್ಧ ಶಿಸ್ತು ಕ್ರಮ ಅನಿವಾರ್ಯ ಎಂದು ಖಂಡ್ರೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಮುಖರಾದ ಮೀನಾಕ್ಷಿ ಸಂಗ್ರಾಮ, ರೋಹಿದಾಸ ಘೋಡೆ, ಇರ್ಷಾದ್ ಅಲಿ ಪೈಲ್ವಾನ್, ದತ್ತಾತ್ರಿ ಮೂಲಗೆ ಇದ್ದರು.
ಡಾ.ಭೀಮಣ್ಣ ಖಂಡ್ರೆ ಕುರಿತು
ಮಾತಾಡುವ ಅರ್ಹತೆಯಿಲ್ಲ
ಹಿರಿಯ ಮುತ್ಸದ್ಧಿ ಡಾ.ಭೀಮಣ್ಣ ಖಂಡ್ರೆ ಬಗ್ಗೆ ಮಾತನಾಡುವ ಅರ್ಹತೆ, ಯೋಗ್ಯತೆ ಸಂಸದ ಭಗವಂತ ಖೂಬಾ ಅವರಿಗಿಲ್ಲ ಎಂದು ಈಶ್ವರ ಖಂಡ್ರೆ ಹೇಳಿದರು. ಹೈಕ ವಿಮೋಚನೆ ಚಳವಳಿ, ಕರ್ನಾಟಕ ಏಕೀಕರಣ, ಬಸವಕಲ್ಯಾಣ ಆಧುನಿಕ ಅನುಭವ ಮಂಟಪ ನಿರ್ಮಾಣ, ಬಸವ ತತ್ವದಂತೆ ಎಲ್ಲ ಸಮಾಜದವರ ಹಿತ ಹಾಗೂ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಭೀಮಣ್ಣ ಖಂಡ್ರೆ ನೀಡಿದ ಕೊಡುಗೆ ಅಪಾರ, ಐತಿಹಾಸಿಕವಾಗಿದೆ. ಅವರು ಸಮಾಜಕ್ಕೆ ಅಮೋಘ ಸೇವೆ ಸಲ್ಲಿಸಿದ ಅನುಭವದಷ್ಟು ವಯಸ್ಸು ಸಹ ಖೂಬಾ ಅವರಿಗಿಲ್ಲ. ಖಂಡ್ರೆ ಮತ್ತು ಇತರ ಹೋರಾಟಗಾರರ ಪ್ರಯತ್ನದಿಂದ ಈ ಭಾಗ ಕರ್ನಾಟಕದಲ್ಲಿ ಉಳಿದಿದೆ. ಇಂದು ಖೂಬಾ ಇಲ್ಲಿಂದ ಸಂಸದ ಆಗಿರಲು ಏಕೀಕರಣದ ಹೋರಾಟ ಕಾರಣ. ಇಲ್ಲದಿದ್ದರೆ ಖೂಬಾ ಮಹಾರಾಷ್ಟ್ರದಲ್ಲಿ ಕಳೆದು ಹೋಗುತ್ತಿದ್ದರು. ಏನೂ ಗೊತ್ತಿಲ್ಲದೆ ಶತಾಯುಷಿ ಅಂಚಿನಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿರುವ ಖಂಡ್ರೆ ಕೊಡುಗೆ ಏನಿದೆ ಎಂದು ಪ್ರಶ್ನಿಸುವುದಕ್ಕೆ ನಾಚಿಕೆ, ಮರ್ಯಾದೆ ಇಲ್ಲವೆ ಎಂದು ತೀಕ್ಷ್ಮ ತಿರುಗೇಟು ನೀಡಿದರು. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಹಕಾರ, ನೀರಾವರಿ ಸೇರಿ ಎಲ್ಲ ಕ್ಷೇತ್ರಗಳಿಗೂ ಖಂಡ್ರೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಬಸವಕಲ್ಯಾಣದ ಆಧುನಿಕ ಮಂಟಪ ನಿರ್ಮಾಣಕ್ಕಾಗಿ ಲಿಂ. ಶ್ರೀ ಚನ್ನಬಸವ ಪಟ್ಟದ್ದೇವರೊಂದಿಗೆ ಸ್ವತಃ ಕಲ್ಲು, ಮಣ್ಣು ಹೊತ್ತು ಕೆಲಸ ಮಾಡಿದ್ದಾರೆ. ಭಾಲ್ಕಿಯಿಂದ ಬಸವಕಲ್ಯಾಣವರೆಗೆ ಪಾದಯಾತ್ರೆ ನಡೆಸಿದ್ದಾರೆ. ಮೊದಲಿಗೆ 25 ಸಾವಿರ ರೂ. ಚೆಕ್ ನೀಡಿ, ಹಣದ ಕೊರತೆ ನೀಗಿಸಲು ಕ್ರಮ ಕೈಗೊಂಡು ಲಿಂಗಾಕಾರದ ಅನುಭವ ಮಂಟಪ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಇವು ಖೂಬಾ ಅವರಿಗೆ ಗೊತ್ತಾ ಎಂದು ಪ್ರಶ್ನಿಸಿದರು. ಎಸ್.ಎಂ. ಕೃಷ್ಣ, ಧರ್ಮಸಿಂಗ್ ಸರ್ಕಾರದಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ರಚನೆಯಾಗಿ ಶಾಸನ ರೂಪ ಪಡೆದಿದೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಿದ್ದಾಗ ನನ್ನ ಮನವಿ ಮೇರೆಗೆ ಗೊರುಚ ನೇತೃತ್ವದಲ್ಲಿ ನೂತನ ಅನುಭವ ಮಂಟಪ ನಿರ್ಮಾಣದ ಸಮಿತಿ ರಚನೆಯಾಗಿ ವರದಿಯೂ ಸಲ್ಲಿಕೆಯಾಗಿದೆ. ಆದರೆ ನಂತರ ಚುನಾವಣೆ, ನೀತಿ ಸಂಹಿತೆ ಕಾರಣ ಹಣ ಕೊಡಲು ಆಗಲಿಲ್ಲ. ಕಾಂಗ್ರೆಸ್ ಸರ್ಕಾರಗಳಿದ್ದಾಗ ನಿರಂತರ ಮಂಡಳಿಗೆ ಹಣ ನೀಡಲಾಗಿದೆ. ಸಂಸದ ಖೂಬಾ ವಿಷಯ ಗೊತ್ತಿರದೆ ಹೇಳಿಕೆ ನೀಡುವ ಸುಳ್ಳುಗಾರ ಎಂದು ಜರಿದರು.
ನನ್ನ ಪರಿವಾರದಲ್ಲಿ ಯಾರೂ ಗುತ್ತಿಗೆದಾರರಿಲ್ಲ. ಗುತ್ತಿಗೆದಾರರಿಗೆ ನನ್ನದೇನೂ ಷರತ್ತುಗಳಿಲ್ಲ. ಭಾಲ್ಕಿ ಕ್ಷೇತ್ರದಲ್ಲಿ ಗುಣಮಟ್ಟದಿಂದ ಕಾಮಗಾರಿ ಮಾಡುವವರು ಮಾತ್ರ ಕೆಲಸ ಮಾಡುತ್ತಾರೆ. ಆದರೆ ಸಂಸದ ಖೂಬಾ ಪರಿವಾರದ ತುಂಬೆಲ್ಲ ಗುತ್ತಿಗೆದಾರರೇ ತುಂಬಿಕೊಂಡಿದ್ದಾರೆ. ಆಸ್ಪತ್ರೆ ಬಟ್ಟೆ ಒಗೆಯುವಿಕೆ ಗುತ್ತಿಗೆಯೂ ಬಿಡದವರು ನನ್ನ ಬಗ್ಗೆ ಮಾತಾಡಲು ಏನಿದೆ ನೈತಿಕತೆ? ಬೀದರ್ ರಿಂಗ್ ರೋಡ್ ಗೆ 50 ಕೋಟಿ ರೂ. ಬಿಡುಗಡೆ ಮಾಡಿಸಿದ್ದೇ ನಾನು.| ಈಶ್ವರ ಖಂಡ್ರೆಭಾಲ್ಕಿ ಶಾಸಕ