ಜಿಲ್ಲೆ

ಬಸ್‌ಗಳಿಲ್ಲದೆ ಪರದಾಡಿದ ಪ್ರಯಾಣಿಕರು

ಚಾಮರಾಜನಗರ: ಹನೂರು ಭಾಗದಲ್ಲಿ ಸಂಚರಿಸುತ್ತಿದ್ದ ಬಹುತೇಕ ಬಸ್‌ಗಳು ಶುಕ್ರವಾರ ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ ಭಾರತ್ ಜೋಡೋ ಪಾದಯಾತ್ರೆಗೆ ಕಾರ್ಯಕರ್ತರನ್ನು ಕರೆದೊಯ್ಯಲು ತೆರಳಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾದು ಕುಳಿತು ತೊಂದರೆ ಅನುಭವಿಸಿದರು.


ಹನೂರು ಭಾಗದಲ್ಲಿ ಸರ್ಕಾರಿ ಬಸ್‌ಗಳಿಗಿಂತ ಖಾಸಗಿ ಬಸ್‌ಗಳ ಸಂಚಾರವೇ ಹೆಚ್ಚಿದೆ. ಆದರೆ ಜಲ್ಲಿಪಾಳ್ಯ, ಪಿ.ಜಿ ಪಾಳ್ಯ, ಪೊನ್ನಾಚಿ, ದಂಟಳ್ಳಿ, ಹೂಗ್ಯಂ ಹಾಗೂ ಇನ್ನಿತರೆ ದೂರದ ಊರುಗಳಿಗೆ ಬಸ್‌ಗಾಗಿ ಗಂಟೆಗಟ್ಟಲೇ ಕಾದು ನಿಲ್ಲಬೇಕಾದ ಸ್ಥಿತಿ ಇದೆ. ಈತನ್ಮಧ್ಯೆ ಶುಕ್ರವಾರ ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಪಾದಯಾತ್ರೆಗೆ ಈ ಭಾಗದಲ್ಲಿ ಸಂಚರಿಸುತ್ತಿದ್ದ ಬಹುತೇಕ ಬಸ್‌ಗಳು ತೆರಳಿದ್ದವು. ಇದರಿಂದ ಸಮರ್ಪಕ ಬಸ್ ಸೌಕರ್ಯ ಸಿಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅದರಲ್ಲೂ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಪಟ್ಟಣದ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾದು ಕುಳಿತರು.


ಬೆಳಗ್ಗೆ ಶಾಗ್ಯ, ಕೌದಳ್ಳಿ, ರಾಮಾಪುರ ಹಾಗೂ ಈ ಭಾಗದ ಬಹುತೇಕ ವಿದ್ಯಾರ್ಥಿಗಳು ಹನೂರಿನ ಶಾಲಾ, ಕಾಲೇಜಿಗೆ ತೆರಳಲು ಬಂದ ಬೆರಳೆಣಿಕೆ ಬಸ್‌ನಲ್ಲಿ ನೂಕು ನುಗ್ಗಲಿನಲ್ಲಿಯೇ ತೆರಳಿದರೆ ಇನ್ನು ಕೆಲವರು ಆಟೋದ ಮೂಲಕ ಆಗಮಿಸಿ ತೊಂದರೆಪಟ್ಟರು. ಜತೆಗೆ ಶಿಕ್ಷಕರು ಶಾಲೆಗಳಿಗೆ ತೆರಳಲು ಪರದಾಡಿದರು. ಹಾಗೆಯೇ ಸಂಜೆಯೂ ಸಹ ವಿದ್ಯಾರ್ಥಿಗಳು ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಕಾದು ನಿಂತು ಬಂದ ಬಸ್‌ನಲ್ಲಿ ತಮ್ಮ ಊರುಗಳಿಗೆ ಮರಳಿದರು.