ಜಿಲ್ಲೆ

ಬಸ್‌ನಲ್ಲಿದ್ದ ಪ್ರಯಾಣಿಕರಿಬ್ಬರಿಗೆ ಗಾಯ

ಗುಂಡ್ಲುಪೇಟೆ: ಸಾರಿಗೆ ಬಸ್‌ಗೆ ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ತಾಕಿದ ಪರಿಣಾಮ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದ್ದು, ಬಸ್‌ನ ಒಂದು ಭಾಗ ಜಖಂಗೊಂಡಿದೆ.

ಸೋಮವಾರ ಪಟ್ಟಣದಿಂದ ಚಾಮರಾಜನಗರಕ್ಕೆ ಹೋಗುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ಗೆ ಶಿಂಡನಪುರ ಸಮೀಪ ಎದುರಿನಿಂದ ವೇಗವಾಗಿ ಬರುತ್ತಿದ್ದ ಕಲ್ಲಿನ ಟಿಪ್ಪರ್ ಉಜ್ಜಿ ಕೊಂಡು ಹೋಗಿದೆ. ಪರಿಣಾಮ ಕಿಟಕಿಯ ಪಕ್ಕ ಕುಳಿತಿದ್ದ ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದ ನಾಗಮ್ಮ ಎಂಬುವರ ಕೈಗೆ ತುಂಬಾ ಗಾಯವಾಗಿದೆ. ಮತ್ತೊಬ್ಬ ಪ್ರಯಾಣಿಕರಿಗೆ ಸಣ್ಣ ಗಾಯವಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಘಟನೆ ನಡೆದರೂ ವಾಹನ ನಿಲ್ಲಿಸದೆ ಪರಾರಿಯಾಗುತ್ತಿದ್ದ ಟಿಪ್ಪರ್ ಅನ್ನು ಬೆನ್ನಟ್ಟಿದ ರೈತ ಸಂಘಟನೆ ಸದಸ್ಯರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪಟ್ಟಣ ಪೊಲೀಸರು ಚಾಲಕ ಧನೇಶ್ ಹಾಗೂ ಟಿಪ್ಪರ್ ಅನ್ನು ವಶಕ್ಕೆ ಪಡೆದಿದ್ದಾರೆ.