ಚಾಮರಾಜನಗರ : ಹನೂರು ತಾಲೂಕಿನ ಪೊನ್ನಾಚಿ ಭಾಗದ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಒಂಟಿಸಲಗ ಸೋಮವಾರ ಪೊನ್ನಾಚಿ ತಾಳುಬೆಟ್ಟ ರಸ್ತೆಯಲ್ಲಿ ಸಾರಿಗೆ ಬಸ್ ಎದುರು ನುಗ್ಗಿ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು.
ಸೋಮವಾರ ಬೆಳಗ್ಗೆ 6.40ರಲ್ಲಿ ಹನೂರಿಗೆ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್‌ಗೆ ಎದುರಾಗಿದೆ. ಈ ವೇಳೆ ರಸ್ತೆ ಮಧ್ಯೆ ನಿಂತಿದ್ದ ಆನೆ ಗೀಳಿಡುತ್ತಾ ಬಸ್‌ನತ್ತ ವೇಗವಾಗಿ ನುಗ್ಗಿತು. ಇದರಿಂದ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಯಿತು. ತಕ್ಷಣ ಚಾಲಕ ಸಮಯಪ್ರಜ್ಞೆ ಮೆರೆದು ಬಸ್ಸನ್ನು ಅರ್ಧ ಕಿಮೀನಷ್ಟು ಹಿಂದಕ್ಕೆ ಚಲಾಯಿಸಿ ಅನಾಹುತ ತಪ್ಪಿಸಿದ್ದಾರೆ.
ಬಳಿಕ ಆನೆ ಕಂದಕಕ್ಕೆ ಇಳಿದು ಕಾಡಿನತ್ತ ಸಾಗಿತ್ತು. ಇದೇ ಮಾರ್ಗದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರನೊಬ್ಬ ಆನೆ ಕಂಡು ರಸ್ತೆಯಲ್ಲೇ ಬೈಕ್ ನಿಲ್ಲಿಸಿ ಬಸ್ ಹತ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಳೆದ ಮೂರ್ನಾಲ್ಕು ತಿಂಗಳಿನಿಂದ ಪೊನ್ನಾಚಿ ಹಾಗೂ ಮರೂರು ಗ್ರಾಮದಲ್ಲಿ ಈ ಕಾಡಾನೆಯ ಹಾವಳಿ ಹೆಚ್ಚಾಗಿದ್ದು, ಗ್ರಾಮದ ಸಮೀಪವೇ ಬಂದು ಜನರನ್ನು ಭಯಭೀತಿಗೊಳಿಸುತ್ತಿದೆ. ಜಮೀನುಗಳಿಗೆ ಲಗ್ಗೆ ಇಟ್ಟು ತೆಂಗಿನಮರ, ಹಲಸು, ಮಾವು ಸೇರಿದಂತೆ ಬೆಳೆಗಳನ್ನು ನಾಶಗೊಳಿಸಿದೆ. ಭಾನುವಾರ ರಾತ್ರಿ ಗೇರಟ್ಟಿ ಗ್ರಾಮಕ್ಕೆ ಲಗ್ಗೆ ಇಟ್ಟಿರುವ ಆನೆ ಕುಡಿಯುವ ನೀರಿನ ತೊಂಬೆಯ ಪೈಪ್ ನಾಶಪಡಿಸಿದೆ.
ಸೆರೆಗೆ ಒತ್ತಾಯ: ಈ ಭಾಗದಲ್ಲಿ ಒಂಟಿಸಲಗ ಉಪಟಳ ಹೆಚ್ಚಾಗಿರುವ ಬಗ್ಗೆ ಆ.4ರ ವಿಜಯವಾಣಿ ಪತ್ರಿಕೆಯಲ್ಲಿ ‘ಪುಂಡಾನೆ ಸೆರೆಗೆ ಇಲಾಖೆ ನಿರ್ಲಕ್ಷ್ಯ’ ಶೀರ್ಷಿಕೆಯಡಿವರದಿ ಪ್ರಕಟಿಸಿತ್ತು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ವೈದ್ಯರ ಕೊರತೆಯ ಕಾರಣ ನೀಡಿ ಆನೆ ಸೆರೆಗೆ ಆ.9 ಮತ್ತು 10 ರಂದು ದಿನಾಂಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದರು. ಆದರೆ, ಇದೀಗ ಪುಂಡಾನೆ ರಸ್ತೆ ಮಧ್ಯೆಯೇ ಬಂದು ನಿಲ್ಲುತ್ತಿದ್ದು, ಅರಣ್ಯ ಇಲಾಖೆ ಸೆರೆಗೆ ಅಗತ್ಯ ಕ್ರಮವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.