ಚಿತ್ರದುರ್ಗ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿ ಕಾರ‌್ಯಕರ್ತರು ಜಿಪಂ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಶಾಲಾ-ಕಾಲೇಜುಗಳು ಈಗಾಗಲೇ ಪ್ರಾರಂಭವಾಗಿದ್ದು, ತ್ವರಿತಗತಿಯಲ್ಲಿ ಹಾಸ್ಟೆಲ್ ಪ್ರವೇಶ ಪೂರ್ಣಗೊಳಿಸುವುದರೊಂದಿಗೆ, ಅವುಗಳಲ್ಲಿ ಸಮಪರ್ಕವಾಗಿ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳ ಶಾಲಾ-ಕಾಲೇಜು ಸಮಯದಲ್ಲಿ ಬಸ್‌ಗಳ ಸಂಚಾರ ಸಂಖ್ಯೆ ಅಧಿಕಗೊಳಿಸಬೇಕು. ಶಕ್ತಿ ಯೋಜನೆಯಿಂದಾಗಿ ಸರ್ಕಾರಿ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ, ಕಾಲೇಜು ತಲುಪಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
ಸಮಯಕ್ಕೆ ಸರಿಯಾಗಿ ಬಸ್‌ಪಾಸ್ ವಿತರಣೆ ಆಗುತ್ತಿಲ್ಲ. ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ಅರ್ಜಿ ಸಲ್ಲಿಸಿದ ತಕ್ಷಣವೇ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವಿತರಿಸಬೇಕು. ವಿವಿಧ ಇಲಾಖೆಗಳಿಂದ ಬಾಕಿ ಇರುವ ವಿದ್ಯಾರ್ಥಿ ವೇತನ ಬಿಡುಗಡೆ ಗೊಳಿಸಬೇಕು. ಏಕರೂಪ ಶೈಕ್ಷಣಿಕ ವೇಳಾಪಟ್ಟಿಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಶಾಲಾ-ಕಾಲೇಜುಗಳಲ್ಲಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸುವಂತೆ ಒತ್ತಾಯಿಸಿ ಜಿಪಂ ಉಪ ಕಾರ‌್ಯದರ್ಶಿ ಕೆ.ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದರು.
ನಗರ ಕಾರ‌್ಯದರ್ಶಿ ಆರ್.ಗೋಪಿ, ರಾಜ್ಯ ಸಮಿತಿ ಸದಸ್ಯ ಕನಕರಾಜ್ ಕೋಡಿಹಳ್ಳಿ, ಮುಖಂಡರಾದ ಚಿತ್ರಸ್ವಾಮಿ, ಚೈತ್ರಾ, ಚರಣ್, ಕಾರ್ತಿಕ್, ಚಂದ್ರಕಲಾ, ಸಂಜಯ್, ಚಂದನಾ, ತಿಪ್ಪೇಶ್, ದರ್ಶನ್, ಸಂಜು, ಕಾರ್ತಿಕ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.