ಜಿಲ್ಲೆ

ಬಸ್ ಸೌಕರ್ಯಕ್ಕಾಗಿ ರಸ್ತೆಗಿಳಿದ ವಿದ್ಯಾರ್ಥಿಗಳು

ಸೇಡಂ: ಶಾಲಾ-ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಮುಷ್ಠಳ್ಳಿ ಗೇಟ್‌ನ ಯಾದಗಿರಿ-ಸೇಡಂ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಸಂಚಾರ ತಡೆದು ವಿದ್ಯಾರ್ಥಿಗಳು ಮಿಂಚಿನ ಪ್ರತಿಭಟನೆ ನಡೆಸಿದರು.

ನಮ್ಮೂರಿನಿಂದ ಕೋಡ್ಲಾ ಮತ್ತು ಸೇಡಂಗೆ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗುತ್ತೇವೆ. ಆದರೆ ನಮ್ಮೂರಿಗೆ ಬಸ್ಸೇ ಬರಲ್ಲ. ಹೀಗಾಗಿ ಗೇಟ್‌ವರೆಗೆ ನಡೆದುಕೊಂಡು ಬರುವುದು ಅನಿವಾರ್ಯವಾಗಿದೆ. ಹೀಗಿದ್ದರೂ ಒಮ್ಮೊಮ್ಮೆ ಬಸ್ ನಿಲ್ಲುವುದಿಲ್ಲ. ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ ಎಂದು ಕಿಡಿಕಾರಿದರು.

ಸಂಬAಧಿತ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮುಷ್ಠಳ್ಳಿಗೆ ಬೆಳಗ್ಗೆ ಮತ್ತು ಸಂಜೆ ಶಾಲಾ-ಕಾಲೇಜುಗಳ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಒದಗಿಸುವುದಾಗಿ ಲಿಖಿತ ಭರವಸೆ ನೀಡುವವರೆಗೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಇಂದು ಭಾನುವಾರ. ನೀವು ಪ್ರತಿಭಟನೆ ನಡೆಸುವುದಾದರೆ ನಿಯಮದಂತೆ ನಮಗೆ ಮಾಹಿತಿ ನೀಡಬೇಕು. ಯಾವುದೇ ಮಾಹಿತಿ ನೀಡದೆ ರಸ್ತೆಯಲ್ಲಿ ಸಂಚಾರ ತಡೆದರೆ ಇತರ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ನಿಮ್ಮ ಹೋರಾಟ ಇರಲಿ ಎಂದು ಸಲಹೆ ನೀಡಿದರು.
ಬಳಿಕ ಸಾರಿಗೆ ಘಟಕ ವ್ಯವಸ್ಥಾಪಕರನ್ನು ಸಂಪರ್ಕಿಸಲು ಪ್ರಯತ್ನಿಸಿದರಾದೂ ಮೊಬೈಲ್ ಸ್ವಿಚ್ ಆಫ್ ಇತ್ತು. ಕೊನೆಗೆ ಪೊಲೀಸ್ ಸಿಬ್ಬಂದಿಯೇ ವಿದ್ಯಾರ್ಥಿಗಳ ಮನವೊಲಿಸಿ ಎರಡ್ಮೂರು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಂಬAಧಿತ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ದಿಢೀರ್ ರಸ್ತೆ ತಡೆಯಿಂದಾಗಿ ಒಂದು ಗಂಟೆಗೂ ಅಧಿಕ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಯಿತು. ಹೆದ್ದಾರಿಯ ಎರಡೂ ಬದಿಯಲ್ಲಿ ಹತ್ತಾರು ವಾಹನಗಳು ನಿಂತಿದ್ದವು.