ಜಿಲ್ಲೆ

ಬಸ್ ಸೌಕರ್ಯ ಒದಗಿಸುವಂತೆ ದಿಢೀರ್ ಪ್ರತಿಭಟನೆ

ಹನೂರು: ಸಮರ್ಪಕ ಬಸ್ ಸೌಕರ್ಯವನ್ನು ಒದಗಿಸುವಂತೆ ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶನಿವಾರ ಹನೂರಿನಲ್ಲಿ ಬಸ್ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ತಾಲೂಕಿನ ಪೊನ್ನಾಚಿ, ರಾಮಾಪುರ, ಎಲ್ಲೇಮಾಳ, ಕೌದಳ್ಳಿ, ಶಾಗ್ಯ, ಬಂಡಳ್ಳಿ ಹಾಗೂ ಇನ್ನಿತರ ಗ್ರಾಮಗಳಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೊಳ್ಳೇಗಾಲದ ಶಾಲಾ- ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದು, ಸಾರಿಗೆ ಇಲಾಖೆಯಿಂದ ಬಸ್‌ಪಾಸ್ ಪಡೆಯಲಾಗಿದೆ. ಆದರೆ ಶಾಲಾ- ಕಾಲೇಜಿಗೆ ತೆರಳುವ ಹಾಗೂ ಗ್ರಾಮಕ್ಕೆ ಹಿಂತಿರುಗುವ ವೇಳೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಒದಗಿಸಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ದೂರಿದರು.

ಇದರಿಂದ ಪ್ರತಿನಿತ್ಯ ಸಾರ್ವಜನಿಕರೊಂದಿಗೆ ಕಿಕ್ಕಿರಿದ ಬಸ್ಸಿನಲ್ಲಿ ನಿಂತುಕೊಂಡೇ ಪ್ರಯಾಣಿಸಬೇಕಿದೆ. ಅಲ್ಲದೆ ಕೆಲವೊಂದು ದಿನಗಳಲ್ಲಿ ಸರಿಯಾದ ಸಮಯಕ್ಕೆ ಬಸ್‌ಗಳು ಬರುತ್ತಿಲ್ಲ. ಇದರಿಂದ ಶಾಲಾ- ಕಾಲೇಜುಗಳಿಗೆ ನಿಗದಿತ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಕಾಲೇಜುಗಳಲ್ಲಿ ಬೈಗುಳ ಕೇಳಬೇಕಾಗಿದೆ. ಇನ್ನು ಮ.ಬೆಟ್ಟದ ಜಾತ್ರೆ, ಅಮಾವಾಸ್ಯೆ ಹಾಗೂ ವಿಶೇಷ ಸಂದರ್ಭಗಳಲ್ಲಿ ನಿರ್ವಾಹಕರು ನಮ್ಮನ್ನು ಬಸ್ ಹತ್ತಲು ಬಿಡುವುದಿಲ್ಲ. ನಿರ್ಲಕ್ಷ್ಯ ಧೋರಣೆ ತೋರಿ ದರ್ಪದಿಂದ ಏಕವಚನದ ಮೂಲಕ ನಿಂದಿಸುತ್ತಾರೆ ಎಂದು ಆಕ್ರೋಶ ಭರಿತದಿಂದ ಪ್ರಶ್ನಿಸಿದರು.

ಸಮರ್ಪಕ ಬಸ್ ಸೌಕರ್ಯವನ್ನು ಕಲ್ಪಿಸುವಂತೆ ಕೊಳ್ಳೇಗಾಲ ಡಿಪೋ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಮಾಡಲಾಗಿದ್ದು, ಪ್ರತಿಭಟನೆಯನ್ನು ಸಹ ನಡೆಸಲಾಗಿದೆ. ಅದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದು, ನಿತ್ಯ ಶಾಲಾ ಕಾಲೇಜಿಗೆ ಹೋಗುವುದೇ ಒಂದು ಸವಾಲಿನ ಕೆಲಸವಾಗಿದೆ. ಅದ್ದರಿಂದ ಸಂಬಮಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕಾಗಮಿಸಿ ಸಮರ್ಪಕ ಬಸ್ ಸೌಕರ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಚಾರ ನಿಯಂತ್ರಕ ಶ್ರೀನಿವಾಸ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಈಗಾಗಲೇ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ಆದರೆ ಇದಕ್ಕೊಪ್ಪದ ವಿದ್ಯಾರ್ಥಿಗಳು ಡಿಪೋ ವ್ಯವಸ್ಥಾಪಕರು ಕೂಡಲೇ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟು ಹಿಡಿದು ಬಸ್ ನಿಲ್ದಾಣದ ಆವರಣದಲ್ಲೇ ಧರಣಿ ಕುಳಿತು ಸಾರಿಗೆ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು.
ತೀವ್ರ ತರಾಟೆ: ಈ ಬಗ್ಗೆ ತಿಳಿದು ಸ್ಥಳಕ್ಕಾಗಮಿಸಿದ ಕೊಳ್ಳೇಗಾಲ ಡಿಪೋ ವ್ಯವಸ್ಥಾಪಕ ಮುತ್ತುರಾಜು ಅವರನ್ನು ವಿದ್ಯಾರ್ಥಿಗಳು ಸುತ್ತುವರಿದು ಸಮರ್ಪಕ ಬಸ್ ಸೌಕರ್ಯ ಕಲ್ಪಿಸದ ಸಂಬಂಧ ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ ಪಾಲಕರು ಹಾಗೂ ಸಾರ್ವಜನಿಕರು ಸಹ ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು. ಈ ವೇಳೆ ಅರ್ಧಗಂಟೆಗೂ ಹೆಚ್ಚು ಕಾಲ ವಾಗ್ವಾದ ನಡೆಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಟ್ಟರು. ಬಳಿಕ ಮುತ್ತುರಾಜು ಮಾತನಾಡಿ, ಬಸ್ ಸಮಸ್ಯೆಯಿರುವ ಬಗ್ಗೆ ವಿದ್ಯಾರ್ಥಿಗಳು ಲಿಖಿತವಾಗಿ ಅರ್ಜಿ ನೀಡಿದರೆ ಇದರ ಆಧಾರದ ಮೇಲೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಾಧ್ಯವಾದಷ್ಟು ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಹಿಂಪಡೆದರು.