ಜಿಲ್ಲೆ

ಬಸ್ ಸೇವೆ ಕಾಣದ 16 ಗ್ರಾಮಗಳು!

ಆನಂದ ಭಮ್ಮನ್ನವರ ಬೆಳಗಾವಿ

ಎರಡನೇ ರಾಜಧಾನಿ, ಸುವರ್ಣಸೌಧ ಹೊಂದಿದ ಹೆಮ್ಮೆ ಬೆಳಗಾವಿಯದ್ದು. ಇದಷ್ಟೇ ಅಲ್ಲದೇ ಇಬ್ಬರು ಸಚಿವರು ಇರುವ ಜಿಲ್ಲೆ ಕೂಡ ಹೌದು. ಇಂತಹ ಜಿಲ್ಲೆಯ 16 ಗ್ರಾಮಗಳಿಗೆ ಇನ್ನೂವರೆಗೂ ಸಾರಿಗೆ ಸೌಲಭ್ಯ ಇಲ್ಲವೆಂದರೆ ದುರಂತದ ಸಂಗತಿ.

ಬೆಳಗಾವಿ ವಿಭಾಗದ ಖಾನಾಪುರ ತಾಲೂಕಿನ 8 ಗ್ರಾಮಗಳಿಗೆ ಸಾರಿಗೆ ಬಸ್ ಕಂಡಿಲ್ಲ. ಅಮಗಾಂವ, ದೇವಗಾಂವ, ಗವಳಿ, ಹೊಲ್ದಾ, ಹುಲಂದ, ಕೀಳೆ ಕೃಷ್ಣಾಪುರ, ಮೆಂಡಿಲ, ಸಾತನಳ್ಳಿ, ಚಿಕ್ಕೋಡಿ ವಿಭಾಗ ವ್ಯಾಪ್ತಿಯ ಚಿಕ್ಕೋಡಿ ತಾಲೂಕಿನ ಪೂಗತ್ಯಾನಟ್ಟಿ, ಮಿರಾಪುರನಟ್ಟಿ, ನಿಪ್ಪಾಣಿ ತಾಲೂಕಿನ ಅಮಲಜರಿ, ರಾಯಬಾಗ ತಾಲೂಕಿನ ಗಿರಿನಾಯಕನವಾಡಿ, ಗೋಕಾಕ ತಾಲೂಕಿನ ಮಲಾಮರಡಿ ಹಾಗೂ ಗಡಿಹೋಳಿ ಗ್ರಾಮಗಳು ಇಂದಿಗೂ ಸಾರಿಗೆ ಬಸ್ ಸೇವೆಯಿಂದ ವಂಚಿತವಾಗಿವೆ.

ರಸ್ತೆ ಸಮಸ್ಯೆ: ಜಿಲ್ಲೆಯ ಈ 16 ಗ್ರಾಮಗಳಿಗೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೇ ಇರುವುದರ ಬಗ್ಗೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಈ ಗ್ರಾಮಗಳಿಗೆ ಸಂಚರಿಸುವ ರಸ್ತೆಗಳು ಇಕ್ಕಟ್ಟಾಗಿರುವ ಹಿನ್ನೆಲೆ ಬಸ್ ಸಂಚಾರ ಸಾಧ್ಯವಾಗಿಲ್ಲ ಎನ್ನುತ್ತಾರೆ. ಆದರೆ, ಈ ಬಗ್ಗೆ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಅಭಿವೃದ್ಧಿ, ನಿರ್ವಹಣೆ ಜತೆಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಬಗ್ಗೆಯೂ ಇಲ್ಲಿನ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ.

ಖಾಸಗಿ ಬಸ್, ಆಟೋ ಆಸರೆ: ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಅನಿವಾರ್ಯವಾಗಿ ಖಾಸಗಿ ಬಸ್ ಅಥವಾ ಆಟೋ ಅವಲಂಬಿಸಿದ್ದಾರೆ. ಅನುಕೂಲಸ್ಥರು ಸ್ವಂತ ವಾಹನದಲ್ಲಿ ಓಡಾಡುತ್ತಾರೆ. ಕೆಲ ಕೂಲಿ ಕಾರ್ಮಿಕರಂತು ನಡೆದುಕೊಂಡೆ ದುಡಿಮೆಗೆ ಹೋಗುವ ಸ್ಥಿತಿ ಇದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಜಿಲ್ಲೆಯಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ, ಚಿಕ್ಕೋಡಿ ಹಾಗೂ ಧಾರವಾಡ ವಿಭಾಗಕ್ಕೆ ಎರಡು ತಾಲೂಕು ಸೇರಿಸಿ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇವುಗಳ ವ್ಯಾಪ್ತಿಗೆ 1208 ಕಂದಾಯ ಗ್ರಾಮಗಳಿವೆ. ಆದರೆ, ಜಿಲ್ಲೆಯ 16 ಗ್ರಾಮಗಳಿಗೆ ಇನ್ನು ಬಸ್ ಸೇವೆ ಇಲ್ಲದೆ ಇರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಇಂತಹ ಆಧುನಿಕ ಕಾಲದಲ್ಲೂ ಬಸ್ ಸೌಕರ್ಯ ಇಲ್ಲದೇ ಇರುವುದು ಖೇದಕರ ಸಂಗತಿ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಕಡೆಗಮನ ಹರಿಸಿ ಈ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ ವಿಶೇಷವಾಗಿ ಖಾನಾಪುರ ತಾಲೂಕಿನ 8 ಗ್ರಾಮಗಳು ಹಾಗೂ ಇನ್ನುಳಿದ ಹಳ್ಳಿಗಳಿಗೆ ಬಸ್ ಓಡಾಡಲು ರಸ್ತೆ ಇಲ್ಲದೇ ಇರುವ ಕಾರಣ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಬಸ್ ಸೇವೆ ಇಲ್ಲದ ಗ್ರಾಮಗಳ ಕುರಿತು ಸರ್ವೇ ನಡೆಸಲಾಗಿದೆ. ಆದಷ್ಟು ಬೇಗ ಬಸ್ ಸೇವೆ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. | ಪ್ರಿಯಾಂಗಾ.ಎಂ., ವ್ಯವಸ್ಥಾಪಕ ನಿರ್ದೇಶಕಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ