ಚನ್ನರಾಯಪಟ್ಟಣ: ತಾಲೂಕಿನ ಗಡಿಭಾಗದ ಎಲ್ಲ ಗ್ರಾಮಗಳಿಗೂ ಸಾರಿಗೆ ಬಸ್ ಸಂಚಾರವನ್ನು ವಿಸ್ತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಹೊಸಾ ಮಾರ್ಗದ ಸಾರಿಗೆ ಬಸ್ ಸಂಚಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಹೊನ್ನಶೆಟ್ಟಿಹಳ್ಳಿಯಿಂದ ಉಳ್ಳಾವಳ್ಳಿ ಗ್ರಾಮಕ್ಕೆ ಸಾರಿಗೆ ಬಸ್ ಸಂಚಾರವನ್ನು ವಿಸ್ತರಿಸಲಾಗುವುದು ಎಂದರು.
ವ್ಯಾಪ್ತಿಯ ಗ್ರಾಮಗಳ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿದಿನ ಬೆಳಗ್ಗೆ 8 ಗಂಟೆ ಹಾಗೂ ಸಂಜೆ 4 ಗಂಟೆಗೆ ಹಿರೀಸಾವೆಯಿಂದ ಬಸ್ ಸಂಚಾರ ಪ್ರಾರಂಭವಾಗಲಿದ್ದು ಬ್ಯಾಡರಹಳ್ಳಿ, ಹೊನ್ನಮಾರನಹಳ್ಳಿ, ಗೌಡರಹಳ್ಳಿ ಮಾರ್ಗ ಹೊನ್ನಶೆಟ್ಟಿಹಳ್ಳಿಗೆ ತಲುಪಿ ಮತ್ತೆ ಹಿಂದುರುಗಿ ಅದೇ ಮಾರ್ಗ ವಾಪಸ್ಸಾಗಲಿದೆ ಎಂದು ತಿಳಿಸಿದರು.
ದೇಶ ಹಾಗೂ ರಾಜ್ಯದಲ್ಲಿ ಕರೋನಾ ಕಾಲಿಟ್ಟ ಹಿನ್ನೆಲೆ ಕಳೆದ 3 ವರ್ಷಗಳಿಂದ ಸರ್ಕಾರದಿಂದ ಅಗತ್ಯ ಅನುದಾನ ಲಭ್ಯವಾಗುತ್ತಿಲ್ಲ. ಆದರೂ ಸರ್ಕಾರಕ್ಕೆ ಒತ್ತಡ ಹೇರಿ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ತಾಲೂಕಿಗೆ 10 ಕ್ಕೂ ಹೆಚ್ಚು ಹೊಸಾ ಸಾರಿಗೆ ಬಸ್‌ಗಳನ್ನು ಕಲ್ಪಿಸುವಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಬಾಳಗಂಚಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜೇಗೌಡ, ಪ್ರಮುಖರಾದ ಡೇರಿ ಕಿಟ್ಟಣ್ಣ, ಚಂದ್ರಣ್ಣ, ನಾರಾಯಣ್, ಮಂಜುನಾಥ್, ಕುಮಾರ್, ಸಾರಿಗೆ ಇಲಾಕೆಯ ಅಧಿಕಾರಿ ವರ್ಗ, ಚಾಲಕ, ನಿರ್ವಾಹಕ ಹಾಗೂ ಗ್ರಾಮಸ್ಥರು ಇದ್ದರು.