ಬೇಲೂರು: ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮಯಕ್ಕೆ ಸರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಿಡುವಂತೆ ಆಗ್ರಹಿಸಿ ತಾಲೂಕಿನ ವಾಟೇಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಗುರುವಾರ ಬೆಳಗ್ಗೆ ಕೆಲಕಾಲ ಬೇಲೂರಿನಿಂದ-ಸಕಲೇಶಪುರಕ್ಕೆ ತೆರಳುತಿದ್ದ ಬಸ್ ಸಂಚಾರ ತಡೆದು ಪ್ರತಿಭಟಿಸಿದರು.\
ನಾರ್ವೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ್, ತಾಲೂಕಿನ ವಿವಿಧ ಗ್ರಾಮಗಳಿಂದ ಬೇಲೂರು-ಸಕಲೇಶಪುರಕ್ಕೆ ಸಾಕಷ್ಟು ಗ್ರಾಮಗಳಿಂದ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳುತ್ತಾರೆ. ಆದರೆ ಈ ಭಾಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದ ಕಾರಣ ಶಾಲೆಯಲ್ಲಿನ ಪಾಠ-ಪ್ರವಚನಗಳಿಂದ ವಂಚಿತರಾಗುತಿದ್ದಾರೆ. ಇದಕ್ಕೆಲ್ಲ ಪ್ರಮುಖವಾಗಿ ಬೇಲೂರು ಮತ್ತು ಸಕಲೇಶಪುರ ಬಸ್ ಡಿಪೋಗಳ ವ್ಯವಸ್ಥಾಪಕರೇ ಕಾರಣರಾಗಿದ್ದಾರೆ. ಇವರು ಸರಿಯಾದ ಸಮಯಕ್ಕೆ ಬಸ್‌ಗಳನ್ನು ಕಳುಹಿಸಿದ್ದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಆದರೆ ಅವರು ಮನಸ್ಸಿಗೆ ಬಂದಂತೆ ಸಮಯವಿಲ್ಲದೆ ಬಸ್‌ಗಳನ್ನು ಬಿಡುವುದರಿಂದ ವಿದ್ಯಾರ್ಥಿಗಳಿಗೆ ಅನನುಕೂಲವಾಗುತ್ತಿದೆ. ಆದ್ದರಿಂದ ಡಿಪೋ ವ್ಯವಸ್ಥಾಪಕರು ಈ ಬಗ್ಗೆ ಗಮನ ಹರಿಸಿ ಸರಿಯಾದ ಸಮಯಕ್ಕೆ ಬಸ್‌ಗಳನ್ನು ಬಿಟ್ಟು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋಗಳ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಾಟೇಹಳ್ಳಿ ಅಕ್ಕಪಕ್ಕದ ಗ್ರಾಮಗಳ ವಿದ್ಯಾರ್ಥಿಗಳಿದ್ದರು.