ದೇವನಹಳ್ಳಿ: ಶಾಸಕರಾಗಿದ್ದವರು ಮಾಜಿ ಆಗುತ್ತಲೇ ಅವರು ರೂಪಿಸಿದ್ದ ಹಲವು ಯೋಜನೆಗಳು ಹಳ್ಳಹಿಡಿಯುತ್ತದೆ ಎಂಬುದಕ್ಕೆ ನಿದರ್ಶನದಂತಿವೆ ಶಿಥಿಲಾವಸ್ಥೆ ತಲುಪಿರುವ ಈ ಪ್ರಯಾಣಿಕರ ತಂಗುದಾಣಗಳು.
ಪಟ್ಟಣದ ಸರ್ಕಾರಿ ಕಿರಿಯ ಕಾಲೇಜಿನ ಮುಂಭಾಗ, ಹೊಸ ಬಸ್ ನಿಲ್ದಾಣದ ಸಮೀಪದಲ್ಲಿ ಪಿಳ್ಳಮುನಿಶಾಮಪ್ಪ ಅವರು ಶಾಸಕರಾಗಿದ್ದಾಗ 4.90 ಲಕ್ಷ ರೂ.ವೆಚ್ಚ ಮಾಡಿ, ಡಾ.ಎಪಿಜೆ ಅಬ್ದುಲ್ ಕಲಾಂ ಹೆಸರಿನಲ್ಲಿ ತಂಗುದಾಣ ನಿರ್ಮಿಸಲಾಗಿತ್ತು. 2018ರಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ 12 ಭಾಗಗಳಲ್ಲಿ ಇದೇ ರೀತಿಯ ತಂಗುದಾಣಗಳು ನಿರ್ಮಾಣಗೊಂಡಿದ್ದವು. ಆದರೆ ಈಗ ಬಹುತೇಕ ಶಿಥಿಲವಾಗಿವೆ.
ಬಹುನಿರೀಕ್ಷೆಯೊಂದಿಗೆ ನಿರ್ಮಿಸಿದ್ದರೂ, ಇಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರೂ ಬಳಸುತ್ತಿಲ್ಲವಾದರೂ ಭಿಕ್ಷುಕರು ಹಾಗೂ ನಿರಾಶ್ರಿತರ ಆಶ್ರಯತಾಣಗಳಾಗಿ ಮಾರ್ಪಟ್ಟಿವೆ. ಇದರಿಂದಾಗಿ ಇವುಗಳ ನಿರ್ಮಾಣಕ್ಕಾಗಿ ಬಳಸಲಾದ ಸಾರ್ವಜನಿಕ ಹಣ ವ್ಯರ್ಥವಾದಂತಾಗಿದೆ.
ಬೀಳುವ ಹಂತದಲ್ಲಿದೆ ನಿಲ್ದಾಣ: ಚಂದ್ರಣ್ಣ ಎಂಬುವವರು ಶಾಸಕರಾಗಿದ್ದಾಗ ವಿಜಯಪುರ ರಸ್ತೆಯ ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ತಂಗುದಾಣ ನಿರ್ಮಿಸಿದ್ದರು. ಇದನ್ನು 2013ರಲ್ಲಿ ಕೆಡವಿದ ವೆಂಕಟಸ್ವಾಮಿ (ಆಗ ಶಾಸಕರಾಗಿದ್ದ)ಅವರು ಮರುನಿರ್ಮಾಣ ಮಾಡಿದ್ದರು. ಇದೂ ಕೂಡ ಭಿಕ್ಷುಕರು ಮತ್ತು ನಿರಾಶ್ರಿತರ ಆಶ್ರಯತಾಣಗಳಾಗಿದ್ದು, ಗರಿಷ್ಠ ಮಟ್ಟದಲ್ಲಿ ಹಾಳಾಗಿವೆ. ಅದರ ಸುತ್ತ ಪೊದೆ ಬೆಳೆದಿವೆ. ಸಂಬಂಧಪಟ್ಟ ಇಲಾಖೆಯವರು ನಿರ್ವಹಣೆ ಮಾಡದಿರುವುದರಿಂದ, ಇದು ಬಳಕೆ ಯೋಗ್ಯವಾಗಿಲ್ಲ.
ಹಿಂದಿನ ಶಾಸಕರು, ಸಂಸದರ ನಿಧಿಯಲ್ಲಿ ನಿರ್ಮಿಸಿದ್ದ ಬಸ್ ಶೆಲ್ಟರ್‌ಗಳ ದುಸ್ಥಿತಿ ಕಂಡು ಬೇಸರವಾಗಿದೆ. ಇಂತಹ ಶೆಲ್ಟರ್ ತಾಲೂಕಿನಲ್ಲಿ ಎಷ್ಟಿವೆ. ಅವುಗಳ ಸ್ಥಿತಿಗತಿ ಏನು?, ಮುಂದೆ ಇದರ ನಿರ್ವಹಣೆ ಜವಾಬ್ದಾರಿ ನೀಡುತ್ತೀರಿ ಎಂದು ಸಿಇಒ ಅಥವಾ ಸಂಬಧಪಟ್ಟ ಇಂಜಿನಿಯರ್ ಅವರನ್ನು ಪ್ರಶ್ನಿಸುತ್ತೇನೆ ಮತ್ತು ಸರ್ಕಾರದ ಹಣ ಈ ರೀತಿ ಉಪಯೋಗಕ್ಕೆ ಬಾರದೆ ಪೋಲಾಗುವುದನ್ನು ಖಂಡಿಸುತ್ತೇನೆ. ಅನಂತಕುಮಾರಿ ಚಿನ್ನಪ್ಪ, ಜಿಪಂ ಸದಸ್ಯೆ