ಜಿಲ್ಲೆ

ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ

ಚಾಮರಾಜನಗರ: ಸಮರ್ಪಕ ಬಸ್ ಸೌಲಭ್ಯವಿಲ್ಲದೆ ಆದರ್ಶ ಶಾಲೆಯ ವಿದ್ಯಾರ್ಥಿಗಳು ಶನಿವಾರ ತೊಂದರೆ ಅನುಭವಿಸಿದರು.

ತಾಲೂಕಿನ ಮಲ್ಲಯ್ಯನಪುರ ಬಳಿ ಇರುವ ಆದರ್ಶ ಶಾಲೆಗೆ 430 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದರು. ಶಾಲೆಯಿಂದ ನಗರ ಮತ್ತು ಇನ್ನಿತರೆ ಗ್ರಾಮೀಣ ಪ್ರದೇಶಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಾಲೆಯ ಪ್ರಾರಂಭ ಮತ್ತು ಮುಕ್ತಾಯದ ಸಮಯಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಆದರ್ಶ ವಿದ್ಯಾಲಯಕ್ಕೆ ಬಿಡಲಾಗುತ್ತಿದೆ. ಶನಿವಾರ ಮಧ್ಯಾಹ್ನ ಶಾಲೆಬಿಟ್ಟು ಸುಮಾರು 1-2 ಗಂಟೆಯಾದರೂ ಶಾಲೆಯ ಕಡೆಗೆ ಬಸ್ ಬಾರದ ಪರಿಣಾಮ ವಿದ್ಯಾರ್ಥಿಗಳು ಪರದಾಡುವಂತಾಯಿತು. ಅದಾದ ನಂತರ ಕೇವಲ 2 ಬಸ್ ಮಾತ್ರ ಶಾಲೆಗೆ ಬಂದಿದೆ. ಬಳಿಕ ಬಸ್‌ಗಳಲ್ಲಿ 430ಕ್ಕೂ ಹೆಚ್ಚು ವಿದ್ಯಾರ್ಥಿಗಳು 2 ಬಸ್‌ಗಳಲ್ಲಿ ನಿಲ್ದಾಣದತ್ತಾ ತೆರಳಿದರು.

ಪ್ರತಿ ಶನಿವಾರ ಸಮಸ್ಯೆ:

ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿ ಶನಿವಾರ ಬಸ್ ಸಮಸ್ಯೆಯನ್ನು ನಿರಂತರವಾಗಿ ಅನುಭವಿಸುತ್ತಿದ್ದಾರೆ. ಕೆಲವು ಸಂದರ್ಭದಲ್ಲಿ ಬಸ್ ಬಾರದೇ 4 -5 ಕಿ.ಮೀ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಹಲವಾರು ಬಾರಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆಗಾಗಿ ಶಾಲಾ ಸಮಯಕ್ಕೆ ಹೆಚ್ಚಿನ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಿ ಎಂದು ಹಲವು ವಿದ್ಯಾರ್ಥಿಗಳು ಆಗ್ರಹಿಸಿದರು.