ಕಳಸ: ಅರಣ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಬಸ್ ಪ್ರಯಾಣದ ವೆಚ್ಚ ಭರಿಸುವಂತೆ ಹೊರನಾಡು, ಚಿಕ್ಕನಕೂಡಿಗೆ, ಬಲಿಗೆ, ತುರ, ಕೆಸುವಿನಕೊಂಡ ಗ್ರಾಮಸ್ಥರು ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮಗಳ ವಿದ್ಯಾರ್ಥಿಗಳು ಹೊರನಾಡು ಮತ್ತು ಕಳಸದ ಶಾಲಾ ಕಾಲೇಜುಗಳಿಗೆ ಖಾಸಗಿ ಬಸ್ ಮೂಲಕ ಪ್ರತಿನಿತ್ಯ ಸಂಚಾರ ಮಾಡುತ್ತಿದ್ದರು. ಇದರ ವೆಚ್ಚವನ್ನು ಎರಡು ವರ್ಷಗಳಿಂದ ಅರಣ್ಯ ಇಲಾಖೆಯಿಂದ ನೀಡಲಾಗುತ್ತಿತ್ತು. ಆದರೆ ಅರಣ್ಯ ಇಲಾಖೆ ಹಿಂದಿನ ವರ್ಷದ ಹಣವನ್ನು ಬಸ್ ಮಾಲಿಕರಿಗೆ ಕೊಡದಿದ್ದರಿಂದ ಉಚಿತ ಪ್ರಯಾಣದ ವ್ಯವಸ್ಥೆ ಸ್ಥಗಿತಗೊಳಿಸುವುದಾಗಿ ಬಸ್ ಮಾಲಿಕರು ತಿಳಿಸಿರುವುದರಿಂದ ಪ್ರಸ್ತುತ ವರ್ಷದಿಂದ ಈ ವೆಚ್ಚವನ್ನು ಮಕ್ಕಳೇ ಭರಿಸುತ್ತಿದ್ದಾರೆ. ಆದ್ದರಿಂದ ಈ ಹಿಂದಿನಂತೆಯೇ ವೆಚ್ಚ ಭರಿಸಿ ವಿದ್ಯಾರ್ಥಿಗಳಿಗೆ ಸಹಕರಿಸಿ ಎಂದು ಮನವಿ ಮಾಡಿದರು. ಮುಖಂಡರಾದ ಜಿ.ಕೆ.ಮಂಜಪ್ಪಯ್ಯ, ಎಂ.ಎ.ಶೇಷಗಿರಿ, ಬಿ.ವಿ.ರವಿ ರೈ, ಎಚ್.ಡಿ.ಜ್ವಾಲನಯ್ಯ, ಗ್ರಾಮಸ್ಥರಾದ ಸವಿಂಜಯ ಜೈನ್, ಸುವರ್ಣಮ್ಮ, ಅರ್ಕಕೀರ್ತಿ ಇತರರಿದ್ದರು.