ನಾಪೋಕ್ಲು: ನಾಪೋಕ್ಲು-ಕೊಳಕೇರಿ ಮುಖ್ಯ ರಸ್ತೆಯಲ್ಲಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಮಹಿಳೆ ಮೃತಪಟ್ಟು, 15 ಮಂದಿ ಗಾಯಗೊಂಡಿದ್ದಾರೆ.
ಕಕ್ಕಬ್ಬೆ ನಿವಾಸಿ ಸರಸ್ವತಿ (65) ಮೃತರು. ಕೊಳಕೇರಿ- ನಾಪೋಕ್ಲು ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ಖಾಸಗಿ ಬಸ್, ಮುಖ್ಯ ರಸ್ತೆಯ ಕೋಟೆರಿ ಎಂಬಲ್ಲಿ ಎದುರಿನಿಂದ ಬಂದ ವಾಹನಕ್ಕೆ ಸ್ಥಳ ನೀಡಲು ರಸ್ತೆಯಂಚಿಗೆ ಸರಿದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಈ ಸಂದರ್ಭದಲ್ಲಿ ಬಸ್‌ನಲ್ಲಿದ್ದ ಕಕ್ಕಬ್ಬೆ ನಿವಾಸಿ ಸರಸ್ವತಿ ತೀವ್ರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಬಸ್‌ನಲ್ಲಿದ್ದ 15 ಮಂದಿ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು, ಅವರಲ್ಲಿ ನಾಲ್ವರಿಗೆ ವಿರಾಜಪೇಟೆ, ಆರು ಮಂದಿಗೆ ಮಡಿಕೇರಿ ಹಾಗೂ ನಾಲ್ವರಿಗೆ ನಾಪೋಕ್ಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೆಲವರು ಚಿಕಿತ್ಸೆ ಪಡೆದ ನಂತರ ಮನೆಗೆ ತೆರಳಿದ್ದಾರೆ.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಡಿವೈಎಸ್ಪಿ ಜಗದೀಶ್, ಸರ್ಕಲ್ ಇನ್ಸ್‌ಪೆಕ್ಟರ್ ಶೇಖರ್ ಭೇಟಿ ನೀಡಿದರು. ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.