ಜಿಲ್ಲೆ

ಬಸ್ ಪಲ್ಟಿಯಾಗಿ ಎಂಟು ಜನರಿಗೆ ಗಾಯ

ವಿಜಯವಾಣಿ ಸುದ್ದಿಜಾಲ ಬಂಕಾಪುರ

ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದು ಎಂಟು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಪಟ್ಟಣದ ಲಂಡೇನ್ ಹಳ್ಳದ ಬಳಿ ಕ್ರಾಸ್​ನಲ್ಲಿ ಶುಕ್ರವಾರ ಸಂಭವಿಸಿದೆ.

ಗಾಯಾಳುಗಳಿಗೆ ಸ್ಥಳೀಯ ಆಲದಕಟ್ಟಿ ಸರ್ಕಾರಿ ಸಮದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿದೆ.

ನಿಂಗಪ್ಪ ರುದ್ರಪ್ಪ ಸಂಕಪ್ಪನವರ, ನಾಗರತ್ನ ಮೃತ್ಯುಂಜಯ ಮಾಳಗಿ, ಕಾವ್ಯಾ ಮೃತ್ಯುಂಜಯ ಮಾಳಗಿ, ಶಫಿವುಲ್ಲಾ ಮಹ್ಮದ್​ಗೌಸ್ ಮುಲ್ಲಾನವರ, ಚಾಲಕ ಧರ್ಮರಾಜ ಜಟ್ಟೇಪ್ಪ ಕೋಟಿಹಾಳ, ನಿರ್ವಾಹಕ ವೀರನಗೌಡ ಗದಿಗೆಪ್ಪಗೌಡ ಹಲಗೌಡ್ರ, ಜಗದೀಶ ಶಿವಪ್ಪ ಬಜನರ, ವೀರಯ್ಯ ಶಿವಬಸಯ್ಯ ಓದಿಶಿಮಠ ತೀವ್ರವಾಗಿ ಗಾಯಗೊಂಡಿದ್ದಾರೆ.

ಗದಗ ಡಿಪೋಗೆ ಸೇರಿದ ಸಾರಿಗೆ ಬಸ್, ಹಾವೇರಿಯಿಂದ ಬಂಕಾಪುರ ಮಾರ್ಗವಾಗಿ ಗದಗಿಗೆ ತೆರಳುವಾಗ ದಿಢೀರ್ ಆಗಿ ಚಲಿಸುತ್ತಿದ್ದ ಬಸ್ ಸ್ಥಗಿತಗೊಂಡು ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಘಟನೆ ಬಗ್ಗೆ ಏನೂ ತಿಳಿಯದಂತಾಗಿದೆ ಎಂದು ಚಾಲಕ ನಡೆದ ಘಟನೆ ಕುರಿತು ವಿವರಿಸಿದ.

ನಿಧಾನವಾಗಿ ಹೊರಟಿದ್ದ ಬಸ್ ಹಳ್ಳಕ್ಕೆ ಬಿತ್ತು. ದೇವರ ಆಶೀರ್ವಾದದಿಂದ ನಾವು ಬದುಕುಳಿದಿದ್ದೇವೆ, ನನ್ನ ಮೊಬೈಲ್ ಫೋನ್, ಓರಿಜಿನಲ್ ಸರ್ಟಿಫಿಕೆಟ್​ಗಳು ಕಳೆದಿವೆ ಎಂದು ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕಾವ್ಯಾ ಬೇಸರ ವ್ಯಕ್ತಪಡಿಸಿದರು. ಘಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್​ಐ ಪರಶುರಾಮ ಕಟ್ಟಿಮನಿ ನೇತೃತ್ವದ ತಂಡ, ಜನರ ಸಹಕಾರದಿಂದ ಗಾಯಾಳುಗಳನ್ನು ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿದರು. ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.