ಬೇಲೂರು: ಚಾಲಕನ ನಿಯಂತ್ರಣ ತಪಿದ್ಪ ಖಾಸಗಿ ಬಸ್ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿಡಗೋಡು ಸಮೀಪ ಶನಿವಾರ ಬೆಳಗ್ಗೆ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಬಸ್ಸಿನಲ್ಲಿದ್ದ ನಾಲ್ವರು ವಿದ್ಯಾರ್ಥಿಗಳು ಸೇರಿ 7 ಜನರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳುಹಿಸಿದ್ದು, ಸಣ್ಣಪುಟ್ಟ ಗಾಯಗೊಂಡವರಿಗೆ ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕನಕಪುರ ಜಿಲ್ಲೆಯ ಹಾರೋಹಳ್ಳಿಯಿಂದ ಶೈಕ್ಷಣಿಕ ಪ್ರವಾಸ ಹಿನ್ನೆಲೆಯಲ್ಲಿ ಎರಡು ಬಸ್‌ಗಳಲ್ಲಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ 71 ಜನರು ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲೂರು ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರವಾಸ ಮುಗಿಸಿ ಬೇಲೂರು ಮೂಲಕ ಕನಕಪುರಕ್ಕೆ ತೆರಳುತ್ತಿದ್ದರು. ಶನಿವಾರ ಬೆಳಗ್ಗೆ 6.30ರಲ್ಲಿ ಬೇಲೂರು ತಾಲೂಕಿನ ನಿಡಗೋಡು ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿದೆ.
ಇದರಿಂದ ಬಸ್‌ನಲ್ಲಿದ್ದ ನಾಲ್ವರು ವಿದ್ಯಾರ್ಥಿಗಳು ಹಾಗೂ ಮೂವರು ಶಿಕ್ಷಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸಹಕಾರದಿಂದ ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕಳುಹಿಸಲಾಯಿತು. ಸಣ್ಣಪುಟ್ಟ ಗಾಯಗಳಾಗಿದ್ದ ವಿದ್ಯಾರ್ಥಿಗಳಿಗೆ ಬೇಲೂರಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ.
ಸ್ಥಳಕ್ಕೆ ಬೇಲೂರು ಠಾಣೆ ಇನ್ಸ್‌ಪೆಕ್ಟರ್ ರವಿಕಿರಣ್, ಸಿಬ್ಬಂದಿ ಕುಮಾರ್, ಚೇತನ್ ಇತರರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.