ಜಿಲ್ಲೆ

ಬಸ್ ನಿಲ್ದಾಣಗಳು ಪೂರ್ಣ ನಿತ್ರಾಣ

ಚಾಮರಾಜನಗರ: ಪ್ರಯಾಣಿಕರ ಸುರಕ್ಷತೆಯ ತಾಣವಾಗಬೇಕಾಗಿರುವ ಬಸ್ ನಿಲ್ದಾಣಗಳು ನಿತ್ರಾಣ ಸ್ಥಿತಿಗೆ ತಲುಪಿದ್ದು, ಪಾಳು ಬೀಳುತ್ತಿರುವ ಕಟ್ಟಡ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ.

ತಾಲೂಕಿನ ಚಂದಕವಾಡಿ ಮತ್ತು ಅಡ್ಡ ರಸ್ತೆ, ಬೂದಿತಿಟ್ಟು ಕ್ರಾಸ್ ಬಳಿ ಇರುವ ಬಸ್‌ನಿಲ್ದಾಣಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿ, ಬಳಕೆಗೆ ಪ್ರಯಾಣಿಕರಿಂದ ದೂರವಾಗಿವೆ. ಚಂದಕವಾಡಿ ಗ್ರಾಮ ಪಂಚಾಯಿತಿಯ ಸಮೀಪದಲ್ಲೇ ಇರುವ ಬಸ್ ನಿಲ್ದಾಣ ಪ್ರಯಾಣಿಕರ ಬಳಕೆಗೆ ಯೋಗ್ಯವಲ್ಲದ ಪರಿಸ್ಥಿತಿಯಲ್ಲಿದೆ. ನಿಲ್ದಾಣದ ಒಳಭಾಗದಲ್ಲಿ ಕಸದ ರಾಶಿ, ಪ್ಲಾಸ್ಟಿಕ್ ತ್ಯಾಜ್ಯ, ಕಲ್ಲು, ಮಣ್ಣು ರಾಶಿ ಹಾಗೂ ಮದ್ಯದ ಪೌಚ್‌ಗಳು ಮತ್ತು ಬಾಟಲ್‌ಗಳನ್ನು ಬಿಸಾಡಲಾಗಿದೆ. ನಿಲ್ದಾಣದ ಗೋಡೆ ಪಾಚಿಕಟ್ಟಿ, ಅಲ್ಲಿ ಗಿಡಗಳು ಬೆಳೆದು ನಿಲ್ದಾಣ ಸ್ಥಿತಿಯೇ ಬದಲಾಗಿದೆ. ಮಳೆ ಬಂದಾಗ ಚಂದಕವಾಡಿ ಮತ್ತು ಬೂದಿತಿಟ್ಟು ಗ್ರಾಮಗಳ ಬಸ್ ನಿಲ್ದಾಣಗಳ ಒಳಗೆ ನೀರು ತುಂಬಿಕೊಳ್ಳುತ್ತದೆ.

ನೀರು ತುಂಬಿದಾಗ ಕಸ-ಕಡ್ಡಿ, ಮದ್ಯ ಹಾಗೂ ಧೂಮಪಾನದ ಕವರ್‌ಗಳು ಕೊಳೆತು ಗಬ್ಬು ನಾರುತ್ತದೆ. ಈ ಸ್ಥಿತಿಯಲ್ಲಿರುವ ಬಸ್ ನಿಲ್ದಾಣವನ್ನು ನೋಡಿ ಪ್ರಯಾಣಿಕರು ನಿಲ್ದಾಣದ ಒಳಗೆ ಹೋಗಿ ನಿಲ್ಲದೆ ಹೊರಗೆ ನಿಂತು ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿರು ಬೇಸಿಗೆಯ ಬಿಸಿಲನ್ನು ತಾಳಲಾರದೇ ತಂಗುದಾಣದ ಹೊರಗೆ ನಿಲ್ಲುವ ಪ್ರಯಾಣಿಕರು ಬಸ್ ನಿಲ್ದಾಣವನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಗ್ರಾಮಗಳ ಜನರಿಗೆ ಬಸ್ ನಿಲ್ದಾಣದ ಸೌಲಭ್ಯವಿದ್ದರೂ ಇಲ್ಲದಂತಾಗಿರುವುದು ಸ್ಥಳೀಯ ಆಡಳಿತ ವ್ಯವಸ್ಥೆಯ ಅವ್ಯವಸ್ಥೆಯನ್ನು ಎತ್ತಿ ತೋರುತ್ತದೆ. ಬಸ್ ನಿಲ್ದಾಣವಿಲ್ಲದ ಊರುಗಳಲ್ಲಿ ಕಾಮಗಾರಿ ಆರಂಭಿಸಿ ಜನರಿಗೆ ಸೌಲಭ್ಯ ದೊರಕಿಸಿಕೊಡುವುದು ಸುಲಭದ ಮಾತಲ್ಲ. ಹೀಗಿರುವಾಗ ಇರುವ ಬಸ್ ನಿಲ್ದಾಣವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೇ ಜನರಿಂದ ದೂರವಾಗುವಂತೆ ಮಾಡುತ್ತಿರುವುದು ಅಕ್ಷಮ್ಯವೇ ಸರಿ.

ಕುಡುಕರ ಅಡ್ಡವಾದ ತಂಗುದಾಣ:

ಚಂದಕವಾಡಿ ಹಾಗೂ ಬೂದಿತಿಟ್ಟು ಬಸ್ ನಿಲ್ದಾಣಗಳು ರಾತ್ರಿಯಾಗುತ್ತಿದ್ದಂತೆಯೇ ಕುಡುಕರ ಅಡ್ಡಗಳಾಗಿ ಮಾರ್ಪಾಡಾಗುತ್ತದೆ. ನಗರ ಮತ್ತು ಪಟ್ಟಣ ಪ್ರದೇಶಗಳಿಂದ ಮದ್ಯ ಖರೀದಿಸಿ ತಂದು ಬಸ್ ನಿಲ್ದಾಣಗಳನ್ನು ಅಡ್ಡೆ ಮಾಡಿಕೊಂಡು ಕುಡಿದು ತ್ಯಾಜ್ಯಗಳನ್ನು ನಿಲ್ದಾಣದಲ್ಲೇ ಬಿಸಾಡುತ್ತಿದ್ದಾರೆ. ನಿತ್ಯವೂ ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಕೆಲಸ-ಕಾರ್ಯಗಳಿಗೆ ತೆರಳುವ ಮಹಿಳೆಯರಿಗೆ ಇದರಿಂದ ಕಿರಿಕಿರಿ ಉಂಟಾಗುತ್ತಿದೆ. ಕೆಲವರು ಕುಡಿದು ಇಲ್ಲೇ ಮಲಗುವುದರಿಂದ ತಂಗುದಾಣದತ್ತಾ ಯಾರು ಸುಳಿಯಲಾರದ ಪರಿಸ್ಥಿತಿ ಉಂಟಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ನಿತ್ಯವೂ ಇದನ್ನು ಗಮನಿಸಿದರೂ ಕೂಡ ಯಾವುದೇ ಕ್ರಮವಹಿಸಲು ಮುಂದಾಗಿಲ್ಲ. ಒಟ್ಟಾರೆಯಾಗಿ ಸಾರ್ವಜನಿಕರಿಗೆ ಅನುಕೂಲವಾಗಬೇಕಿದ್ದ ತಂಗುದಾಣಗಳು, ಸಮಸ್ಯೆಗಳನ್ನು ಉಂಟು ಮಾಡುತ್ತಿದೆ.

ಕೋಡಿಮೋಳೆಗೆ ಬೇಕು ಬಸ್‌ನಿಲ್ದಾಣ:

ಹಲ್ಲು ಇದ್ದವನ ಬಳಿ ಕಡಲೆ ಇಲ್ಲ. ಕಡಲೆ ಇದ್ದವನ ಬಳಿ ಹಲ್ಲೇ ಇಲ್ಲ...ಎಂಬ ಗಾದೆ ಮಾತಿನಂತೆ

ಚಂದಕವಾಡಿ ಮತ್ತು ಅಡ್ಡರಸ್ತೆ, ಬೂದಿತಿಟ್ಟು ಕ್ರಾಸ್‌ನಲ್ಲಿರುವ ಅಧ್ವಾನಗೊಂಡ ಬಸ್ ನಿಲ್ದಾಣದಿಂದಾಗಿ ತಂಗುದಾಣ ಇದ್ದರೂ ಜನರ ಉಪಯೋಗಕ್ಕೆ ಬರುತ್ತಿಲ್ಲ. ಆದರೆ ಕೋಡಿಮೋಳೆ ಗ್ರಾಮದಲ್ಲಿ ಬಸ್ ನಿಲ್ದಾಣದ ಅವಶ್ಯಕತೆ ಇದ್ದರೂ ತಂಗುದಾಣವಿಲ್ಲ. ಕೋಡಿಮೋಳೆ ಹಾಗೂ ಬಸವನಪುರ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ಚಂದಕವಾಡಿ ಹಾಗೂ ಚಾಮರಾಜನಗರದ ಶಾಲಾ ಕಾಲೇಜಿಗೆ ಹೋಗುತ್ತಾರೆ. ಬಸ್ ನಿಲ್ದಾಣ ಇಲ್ಲದ ಕಾರಣ ಬಿಸಿಲು-ಮಳೆಯ ಸಮಯದಲ್ಲಿ ಬಸ್‌ಗಳಿಗಾಗಿ ಕಾಯುವಾಗ ಪ್ರಯಾಣಿಕರಿಗೆ ಹಾಗೂ ವಿಧ್ಯಾರ್ಥಿಗಳು ಬಹಳ ಪರದಾಡುವ ಸ್ಥಿತಿ ಎದುರಾಗಿದೆ. ಅಕ್ಕ-ಪಕ್ಕದ ಅಂಗಡಿಗಳಲ್ಲಿ ನಿಂತು ಬಸ್‌ಗಳಿಗಾಗಿ ಕಾಯುತ್ತಾರೆ. ಈ ನಿಟ್ಟಿನಲ್ಲಿ ಕೋಡಿಮೋಳೆ ಗ್ರಾಮದಲ್ಲಿ ಸೂಕ್ತವಾದ ಬಸ್ ತಂಗುದಾಣವನ್ನು ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬಸ್ ನಿಲ್ದಾಣವನ್ನು ಈ ಕೂಡಲೇ ಪರಿಶೀಲನೆ ಮಾಡಿ ಸ್ವಚ್ಛಗೊಳಿಸುತ್ತೇವೆ. ನಿಲ್ದಾಣದಲ್ಲಿ ಮದ್ಯಪಾನ ಮಾಡದಂತೆ ತಡೆದು, ಪ್ರಯಾಣಿಕರಿಗೆ ನಿಲ್ಲಲು, ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸುತ್ತೇವೆ.

-ನಟರಾಜು, ಅಧ್ಯಕ್ಷ, ಗ್ರಾಮ ಪಂಚಾಯಿತಿ, ಚಂದಕವಾಡಿ

ಬೂದಿತಿಟ್ಟು ಕ್ರಾಸ್‌ನಲ್ಲಿರುವ ಬಸ್ ನಿಲ್ದಾಣ ತೀರ ಹದಗೆಟ್ಟಿದೆ. ಇಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಪ್ರಯಾಣಿಕರು ನಿಲ್ಲಲು ವ್ಯವಸ್ಥೆ ಇಲ. ನಿಲ್ದಾಣಕ್ಕೆ ಕಾಯಕಲ್ಪದ ಅಗತ್ಯವಿದೆ. ಮಳೆ ಬಂದಾಗ ನಿಲ್ಲಲು ತುಂಬಾ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಗಮನ ಹರಿಸಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ ಸರಿಪಡಿಸಬೇಕು. ಕೋಡಿಮೋಳೆ ಗ್ರಾಮಕ್ಕೆ ಸೂಕ್ತವಾದ ಬಸ್ ನಿಲ್ದಾಣವನ್ನು ನಿರ್ಮಿಸಬೇಕು.

-ಎನ್.ಕಾಂತರಾಜು, ಅಧ್ಯಕ್ಷ, ಭಗತ್ ಸಿಂಗ್ ಯುವ ಸೇನೆ, ಕೋಡಿಮೋಳೆ, ಚಾಮರಾಜನಗರ