ಔರಾದ್: ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರವನ್ನು ರಾಜ್ಯ ಸರ್ಕಾರ ೧೫ರಷ್ಟು ಏರಿಕೆ ಮಾಡಿರುವುದನ್ನು ಖಂಡಿಸಿ ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಎಬಿವಿಪಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ಗ್ರೇಡ್-೨ ತಹಸೀಲ್ದಾರ್ ವೆಂಕಟೇಶ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಪ್ರಮುಖ ಅಶೋಕ ಶೆಂಬೆಳ್ಳೆ, ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿ ಸಾವಿರಾರು ಜನ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಓಡಾಡುತ್ತಾರೆ. ಆದರೆ ಸರ್ಕಾರ ದರ ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಹಾಕಿ ಎಂದು ಎಬಿವಿಪಿ ಪ್ರಮುಖ ಅಶೋಕ ಶೆಂಬೆಳ್ಳೆ ಅಕ್ರೋಶ ವ್ಯಕ್ತಪಡಿಸಿದರು.
ಶಕ್ತಿ ಯೋಜನೆಯಿಂದ ನಿತ್ಯ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿ ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ, ಬಸ್‌ಗಳಲ್ಲಿ ಸ್ಥಳಾವಕಾಶ ಇಲ್ಲದೆ ನಿಂತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಪ್ರಯಾಣ ದರ ಹಿಂಪಡೆದು ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.
ಶಶಿಕಾಂತ ರ‍್ಯಾಕಲೆ, ಅನಿಲ್ ಮೇತ್ರೆ, ದೇವಾನಂದ, ನಿತೀನ, ವೈಷ್ಣವಿ, ಭಾಗ್ಯಶ್ರೀ, ಪೂನಂ, ಭವಾನಿ, ಪೂಜಾ, ಮಹಾದೇವ, ಸಾಯಿಕುಮಾರ ಇತರರಿದ್ದರು.