ಜಿಲ್ಲೆ

ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಸರಗೂರು: ತಾಲೂಕಿನ ಬಿ.ಮಟಕೆರೆ ಗ್ರಾಪಂ ವ್ಯಾಪ್ತಿಯ ಶಾಂತಿನಿವಾಸ ಗೇಟ್ ಬಳಿ ಗುರುವಾರ ಸಂಜೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾರೆ.


ನಡಾಡಿ ಗ್ರಾಮ ನಿವಾಸಿ ಸತೀಶ್ ಕುಮಾರ್(27) ಮೃತಪಟ್ಟವರು. ಗುರುವಾರ ತಮ್ಮ ಬೈಕ್‌ನಲ್ಲಿ ಸರಗೂರಿನಿಂದ ನಡಾಡಿಗೆ ತೆರಳುವ ವೇಳೆ ಕಲ್ಲಹಳ್ಳ-ಬಾಡಗ ಮಧ್ಯ ನಡುವಿನ ಶಾಂತಿನಿವಾಸ ಗೇಟ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸತೀಶ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಸಣ್ಣಪ್ಪ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು, ಸರಗೂರಿನ ಸ್ವಾಮಿ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸರಗೂರು ಪೋಲಿಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ನಂದೀಶ್ ಕುಮಾರ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.


ಸೂಕ್ತ ಕ್ರಮಕ್ಕೆ ಪ್ರತಿಭಟನೆ: ವಿಷಯ ತಿಳಿದ ಕುಟುಂಬಸ್ಥರು, ಗ್ರಾಮಸ್ಥರು ಸ್ಥಳ್ಕಕಾಗಮಿಸಿ ಪ್ರತಿಭಟನೆ ನಡೆಸಿದರು. ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಾಣಾಧಿಕಾರಿ ಮತ್ತು ಎಚ್.ಡಿ.ಕೋಟೆ- ಸರಗೂರು ಡಿಪೋ ಮ್ಯಾನೇಜರ್ ಸ್ಥಳಕ್ಕೆ ಆಗಮಿಸಬೇಕು. ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು. ಅಲ್ಲಿವರೆಗೂ ಶವವನ್ನು ತೆಗೆಯಲು ಬಿಡುವುದಿಲ್ಲ. ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.


ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಾಣಾಧಿಕಾರಿ ಶ್ರೀನಿವಾಸ ಮತ್ತು ಎಚ್.ಡಿ.ಕೋಟೆ- ಸರಗೂರು ಡಿಪೋ ವ್ಯವಸ್ಥಾಪಕ ತ್ಯಾಗರಾಜು ಸ್ಥಳಕ್ಕೆ ಆಗಮಿಸಿ ಸಂಬಂಧಿಕರಿಗೆ ಸ್ವಾಂತನ ಹೇಳಿದರಲ್ಲದೆ, ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸುವ ಜತೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆೆದರು. ಬಳಿಕ ಮೃತದೇಹವನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಸಾಗಿಸಲಾಯಿತು. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.