ಹುಣಸೂರು: ತಾಲೂಕಿನ ಕಿರಿಜಾಜಿ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ಮತ್ತು ಕನ್ನಂಬಾಡಮ್ಮ ದೇವರ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕಿರಿಜಾಜಿ ಗ್ರಾಮದ ಹೃದಯ ಭಾಗದಲ್ಲಿರುವ ಬಸವೇಶ್ವರಸ್ವಾಮಿ ಮತ್ತು ಕನ್ನಂಬಾಡಮ್ಮ ದೇವಿಯ ರಥೋತ್ಸವಕ್ಕೆ ಸುತ್ತಮುತ್ತಲ ಗ್ರಾಮದ ಭಕ್ತರು ಸಾಕ್ಷಿಯಾದರು. ಒಂದೇ ರಥದಲ್ಲಿ ಎರಡು ದೇವರ ಉತ್ಸವ ಮೂರ್ತಿಗಳೊಂದಿಗೆ ರಥೋತ್ಸವ ನಡೆಯುವ ತಾಲೂಕಿನ ವಿಶೇಷ ಧಾರ್ಮಿಕ ಕಾರ್ಯಕ್ರಮ ಇದಾಗಿದೆ. ರಥೋತ್ಸವದ ಅಂಗವಾಗಿ ಬೆಳಗ್ಗೆ ಗ್ರಾಮದ ಸಮೀಪ ಹರಿಯುವ ಲಕ್ಷ್ಮಣತೀರ್ಥ ನದಿತಟದಲ್ಲಿ ದೇವರ ಮೂರ್ತಿಗಳನ್ನು ಶುಚಿಗೊಳಿಸಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಬಳಿಕ ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ಆಗಮಿಸಿದರು.
ಮಧ್ಯಾಹ್ನ ರಂಗನಾಥಸ್ವಾಮಿ, ಮಾರಮ್ಮ ದೇವರು ಮತ್ತು ಕುರ್ಜುವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. 1.30ಕ್ಕೆ ಸರಿಯಾಗಿ ದೇವಾಲಯದ ಅರ್ಚಕರು ಉತ್ಸವ ಮೂರ್ತಿಗಳನ್ನು ಹೊತ್ತವರಿಗೆ ದೀವಟಿಗೆ ಆರತಿ ಸಲ್ಲಿಸಿದರು. ನಂತರ ದೇವರ ಆವಾಹನೆಯೊಂದಿಗೆ ಮೂರು ಸುತ್ತು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದರು. ದೇವರ ಆವಾಹನೆಯಾದ ಕಾರಣ ಅರ್ಚಕರನ್ನು ಇಬ್ಬರು ಗಟ್ಟಿಯಾಗಿ ಹಿಡಿದು ಅವರೊಡನೆ ಪ್ರದಕ್ಷಿಣೆ ಸುತ್ತಿ, ಅರ್ಚಕರ ಆವೇಶ, ಭಕ್ತಿಯ ಪರಾಕಾಷ್ಠೆಯನ್ನು ನಿಯಂತ್ರಿಸಿದರು.
ಈ ನಡುವೆ ಗ್ರಾಮದ ಯುವಕರು ಬಿಳಿಪಂಚೆ, ಶರ್ಟ್ ಮತ್ತು ಶಲ್ಯ ಧರಿಸಿ ದೇವರ ಪರ ಉದ್ಘೋಷಗಳನ್ನು ಕೂಗಿ ಬಲಿ ಅನ್ನ ಹಾಕಿ ಬಂದರು. ನಂತರ ಎರಡೂ ದೇವರ ಉತ್ಸವ ಮೂರ್ತಿಗಳನ್ನು ಹೊತ್ತವರನ್ನು ಮೆರವಣಿಗೆ ಮೂಲಕ ರಥದ ಬಳಿಗೆ ಕರೆತರಲಾಯಿತು. ನಂತರ ರಥದಲ್ಲಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಭಕ್ತರು ಜಯಘೋಷದೊಂದಿಗೆ ರಥವನ್ನು ಎಳೆದರು. ಮೂರು ಬಾರಿ ದೇವಾಲಯದ ಸುತ್ತ ರಥವನ್ನು ಎಳೆದು ತಂದು ಸ್ವಸ್ಥಾನದಲ್ಲಿರಿಸಲಾಯಿತು.
ಶಾಸಕ ಎಚ್.ಪಿ.ಮಂಜುನಾಥ್, ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ. ಹರೀಶ್‌ಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಯೋಗಾನಂದಕುಮಾರ್ ರಥೋತ್ಸವದಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ಮುಖಂಡರಾದ ಧನಂಜಯ, ಮಹದೇವ್, ಗಜೇಂದ್ರ, ಶ್ರೀನಿವಾಸ ಸೇರಿದಂತೆ ಯಜಮಾನರು, ಹಿರಿಯರು, ಮಹಿಳೆಯರು ಭಾಗವಹಿಸಿದ್ದರು.