ಜಿಲ್ಲೆ

ಬಸವೇಶ್ವರರ ಸಾಂಸ್ಕೃತಿಕ ಅಭಿಯಾನ 21ಕ್ಕೆ

ಸಕಲೇಶಪುರ: ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಸಾಂಸ್ಕೃತಿಕ ಅಭಿಯಾನ ಕಾರ್ಯಕ್ರಮ ವನ್ನು ಸೆ.21ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದು, ಬಸವಣ್ಣನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹಳೇಬೀಡಿನ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಗುರುವಾರ ಮಲೆನಾಡು ವೀರಶೈವ ಸಮಾಜ ಹಾಗೂ ಅಂಗಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿದ್ದ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಜಗಜ್ಯೋತಿ ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಸಮಾಜಕ್ಕೆ ಹೆಮ್ಮೆಯ ಸಂಗತಿ. 12ನೇ ಶತಮಾನದಲ್ಲಿ ಸಮಾನತೆಯ ಸಂದೇಶ ನೀಡಿ ಕಾಯಕವೇ ಕೈಲಾಸ ಎಂಬ ತತ್ವ ಬೋಧಿಸಿದ ಬಸವೇಶ್ವರರ ಆದರ್ಶಗಳನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸೆ.21ರಂದು ಜಿಲ್ಲಾ ಕೇಂದ್ರ ಹಾಸನದಲ್ಲಿರುವ ಹಾಸನಾಂಬ ಕಲಾಕ್ಷೇತ್ರದಲ್ಲಿ ದಿನವಿಡೀ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಬಸವಣ್ಣನವರ ರಥಯಾತ್ರೆಗೆ ಸ್ವಾಗತ ಕಾರ್ಯಕ್ರಮ, 11 ಗಂಟೆಗೆ ವಿದ್ಯಾರ್ಥಿಗಳ ಜತೆ ಸಂವಾದ, ಮಧ್ಯಾಹ್ನ 4 ಗಂಟೆಗೆ ಸದ್ಭಾವನಾ ಪಾದಯಾತ್ರೆ ಮತ್ತು ರಥ ಮೆರವಣಿಗೆ, ಸಂಜೆ 5 ಗಂಟೆಗೆ ವೇದಿಕೆ ಕಾರ್ಯಕ್ರಮ ಹಾಗೂ ರಾತ್ರಿ 8 ಗಂಟೆಗೆ ಜಂಗಮದೆಡೆಗೆ ಎಂಬ ನಾಟಕ ಪ್ರದರ್ಶನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ನಾಡಿನ ಪ್ರಮುಖ ಸ್ವಾಮೀಜಿಗಳು, ಬಸವೇಶ್ವರರ ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಎಲ್ಲ ಸಮಾಜದ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.

ಸಂಕಲಾಪುರ ಮಠದ ಧರ್ಮೇಂದ್ರ ಮಹಾಸ್ವಾಮೀಜಿ, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪರಮೇಶ್, ಹಾಸನ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಮೂಗಲಿ ಧರ್ಮಪ್ಪ, ಕಾರ್ಯದರ್ಶಿ ಯಡೆಹಳ್ಳಿ ಆರ್.ಮಂಜುನಾಥ್, ವಿದ್ಯಾಶಂಕರ್, ಗುರುವೇಗೌಡ ಕಲ್ಯಾಣ ಮಂಟಪ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಡಿ.ಬಸವಣ್ಣ, ಅಕ್ಕಮಹಾದೇವಿ ವೇದಿಕೆಯ ಅಧ್ಯಕ್ಷೆ ಕೋಮಲಾ ದಿನೇಶ್, ನರೇಶ್, ವಿಜಯ್‌ಕುಮಾರ್, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಒಕ್ಕಲಿಗ ಮುಖಂಡ ಎಚ್.ಎಚ್. ಉದಯ್ ಇತರರು ಇದ್ದರು.