ಜಿಲ್ಲೆ

ಬಸವೇಶ್ವರರ ಪುತ್ಥಳಿ ಸ್ಥಳಾಂತರಕ್ಕೆ ಆಗ್ರಹ

ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಶ್ರೀಬಸವೇಶ್ವರರ ಪುತ್ಥಳಿಯ ಉದ್ಘಾಟನೆಯನ್ನು ಸ್ಥಗಿತಗೊಳಿಸಿ ಮೂಲಸ್ಥಾನಕ್ಕೆ ಸ್ಥಳಾಂತರಗೊಳಿಸಬೇಕೆಂದು ಒತ್ತಾಯಿಸಿ ವಿಶ್ವರತ್ನ, ವಿಶ್ವಜ್ಞಾನಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಗುಂಪುಗೂಡಿದ ಪ್ರತಿಭಟನಾಕಾರರು, ಇಲ್ಲಿಂದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ನಿಯೋಜನೆಗೊಂಡಿದ್ದ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಮುಖ್ಯಗೇಟ್ ಮುಂಭಾಗ ಪ್ರತಿಭಟನೆ ನಡೆಸಿದರು.

ಬಸವಣ್ಣರ ಪುತ್ಥಳಿ ಪ್ರತಿಷ್ಠಾಪನೆ ವೇಳೆ ಅನಾಮಧೇಯ ವ್ಯಕ್ತಿಗಳು ರಾತ್ರೋರಾತ್ರಿ ಜಿಲ್ಲಾಡಳಿತ ಭವದ ಆವರಣದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕಿ ಮಂಜುಳಾ ಮತ್ತು ಎಇಇ ವೃಷಭೇಂದ್ರಪ್ಪ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾನೂನು ಬಾಹಿರ ಚಟುವಟಿಕೆಗೆ ಬೆಂಬಲ ನೀಡಿದ್ದಾರೆ. ಇವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸಾಮಾಜಿಕ ಹೋರಾಟಗಾರ ಸಿ.ಎಂ.ಕೃಷ್ಣ ಮಂಡ್ಯ ಮಾತನಾಡಿ, ಯಾವುದೇ ಅನುಮತಿ ಇಲ್ಲದೆ ಜಿಲ್ಲಾಡಳಿತ ಭವನಕ್ಕೆ ರಾತ್ರಿ ಪ್ರವೇಶ ಮಾಡಿದ್ದಾರೆ. ರಾತ್ರೋರಾತ್ರಿ ಜಿಲ್ಲಾಡಳಿತನಕ್ಕೆ ಯಾರು ಬೇಕಾದರೂ ನುಗ್ಗಬಹುದು ಎನ್ನುವಂತಾಗಿದೆ. ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಪುತ್ಥಳಿಯನ್ನು ಡಾ.ರಾಜ್‌ಕುಮಾರ್ ರಂಗಮಂದಿರದ ಮುಂಭಾಗ ಸ್ಥಾಪಿಸಬೇಕೆಂದು ಜಾಗ ಗುರುತಿಸಲಾಗಿತ್ತು. ತದನಂತರ ಜಿಲ್ಲಾಡಳಿತ ಭವನದ ಆವರಣದಲ್ಲಿ ಕಾಮಗಾರಿ ಶುರುವಾಯಿತು. ಈ ಹಿನ್ನೆಲೆಯಲ್ಲಿ ಕದಂಬ ಅಂಬರೀಷ್, ನಟರಾಜು ಹೊಂಗನೂರು, ನಾಗೇಶ್ ಭೋಗಾಪುರ ಜಿಲ್ಲಾಡಳಿತಕ್ಕೆ ತಕರಾರು ಸಲ್ಲಿಸಿದರು. ಇದಕ್ಕೆ ಸ್ಪಂದನೆ ದೊರೆಯಲಿಲ್ಲ ಎಂದರು.

ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಶಿಲ್ಪಾನಾಗ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರೇಷ್ಮೆ, ಪಶುಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮತ್ತು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಕದಂಬ ಅಂಬರೀಷ್,ದಸಂಸ ಶಿವಣ್ಣ, ಸೋಮಸುಂದರ್, ಸಂಘಸೇನಾ, ನಾಗೇಶ್, ಹೊಂಗನೂರು ನಂಜಯ್ಯ, ಶಿವಶಂಕರ್, ನಟರಾಜು, ನಿಂಗರಾಜು ಮತ್ತು ಇತರರು ಭಾಗವಹಿಸಿದ್ದರು.