ಬಸವಕಲ್ಯಾಣ: ಕರ್ನಾಟಕದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಬಸವ ಜಯಂತಿ ನಿಮಿತ್ತ ಬುಧವಾರದಿಂದ ನಡೆಯಲಿರುವ ಮೂರು ದಿನದ ಮಹಾತ್ಮ ಬಸವೇಶ್ವರ ಜಾತ್ರಾ ಅಮೃತ ಮಹೋತ್ಸವದ ಸಿದ್ಧತೆ ಪೂರ್ಣಗೊಂಡಿದೆ.
ಎಲ್ಲೆಡೆ ಹಬ್ಬದ ವಾತಾವರಣ ಕಂಡುಬರುತ್ತಿದ್ದು, ಬಸವಾನುಯಾಯಿಗಳನ್ನು ಶರಣರು ನಾಡು ಕೈಬೀಸಿ ಕರೆಯುತ್ತಿದೆ.
ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ, ವಿಶ್ವಸ್ಥ ಸಮಿತಿ ಸಹಯೋಗದಡಿ ಮೂರು ದಿನ ವಿವಿಧ ಕಾರ್ಯಕ್ರಮಗಳ ಬಗ್ಗೆ ನಗರ ಸೇರಿ ತಾಲೂಕಿನಲ್ಲಿ ಧ್ವನಿವರ್ಧಕಗಳ ಮೂಲಕ ಭರ್ಜರಿ ಪ್ರಚಾರ ನಡೆಸಿ ಜಾತ್ರೆಗೆ ಆಹ್ವಾನ ನೀಡಲಾಗಿದೆ. ನಗರದ ಪ್ರಮುಖ ರಸ್ತೆ ಬದಿ ಗೋಡೆಗೆ ಡಿಜಿಟಲ್ ಪೋಸ್ಟರ್, ಪ್ರಮುಖ ಸ್ಥಳಗಳಲ್ಲಿ ಅಳವಡಿಸಿದ ಕಟೌಟ್‌ಗಳು ಗಮನ ಸೆಳೆಯುತ್ತಿವೆ.
ಅಕರ್ಷಕವಾಗಿ ನವೀಕರಣಗೊಳ್ಳುತ್ತಿರುವ ಶ್ರೀ ಬಸವೇಶ್ವರ ದೇವಸ್ಥಾನ ಮತ್ತು ಬಸವ ವೃತ್ತ ವಿಶೇಷ ವಿದ್ಯುತ್ ದೀಪಾಲಂಕಾರದಿAದ ಕಂಗೊಳಿಸುತ್ತಿದ್ದು, ಚೌಕ್‌ನಲ್ಲಿ ನಿರ್ಮಿಸಿದ ಕೋಟೆಯ ಮಾದರಿ ವಿದ್ಯುತ್ ದೀಪದ ಬೆಳಕಿನಲ್ಲಿ ರಾತ್ರಿ ವೇಳೆ ಕಣ್ಮನ ಸೆಳೆಯುತ್ತಿದೆ. ಪ್ರಮುಖ ಸ್ಥಳ, ದೇವಸ್ಥಾನ ರಸ್ತೆಯ ಎರಡೂ ಬದಿ ಹಾಗೂ ದೇವಸ್ಥಾನ ಸಂಕೀರ್ಣದ ಅಂಗಡಿಗಳನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ.
ಕೋಟೆಯಿಂದ ತ್ರಿಪುರಾಂತವರೆಗಿನ ಮುಖ್ಯ ರಸ್ತೆ ವಿಭಜಕದಲ್ಲಿ ಷಟಸ್ಥಲ ಧ್ವಜಗಳು ಹಾರಾಡುತ್ತಿದ್ದು, ಹಸಿರೆಲೆಯ ಸಾಲು ಗಿಡಗಳಲ್ಲಿ ಹಾಕಿರುವ ಸಿರಿಯಲ್ ಲೈಟ್‌ಗಳು ಜಾತ್ರೆ ವೈಭವ ಸಾರುತ್ತಿವೆ. ಎಲ್ಲ ಕಾರ್ಯಕ್ರಮಗಳ ಯಶಸ್ಸಿಗೆ ಬಿಡಿಪಿಸಿ ಮತ್ತು ಬಿಡಿವಿಸಿ ಪದಾಧಿಕಾರಿಗಳ ಜತೆಗೆ ಗಣ್ಯರು, ಬಸವಪರ ಸಂಘಟನೆ ಪ್ರಮುಖರು ವಿಶೇಷವಾಗಿ ಯವಕರು ಕೈಜೋಡಿಸಿದ್ದಾರೆ.
ರಥ ಮೈದಾನದಲ್ಲಿ ನಡೆವ ಕಾರ್ಯಕ್ರಮಗಳಿಗಾಗಿ ಸಿದ್ಧತೆ ಜತೆಗೆ ಮೈದಾನದ ಒಂದು ಕಡೆ ಕುಸ್ತಿ ಪ್ರದರ್ಶನಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಸಮೀಪದ ಐಟಿಐ ಕಾಲೇಜು ಕಟ್ಟಡದಲ್ಲಿ ಹಾಗೂ ಪರುಷಕಟ್ಟೆ ಬಳಿ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ.
ಅಂಬಾರಿಯೊಂದಿಗೆ ತೊಟ್ಟಿಲು ಇಂದು: ಜಾತ್ರೆ ಅಮೃತೋತ್ಸವದ ಮೊದಲ ದಿನವಾದ ಬುಧವಾರ ಬೆಳಗ್ಗಿನ ಜಾವ ೫ಕ್ಕೆ ದೇವಸ್ಥಾನದಲ್ಲಿ ಬಸವಣ್ಣನವರ ಮೂರ್ತಿಗೆ ಅಷ್ಟಗಂಧ ಪೂಜೆ, ವಚನ ಪಠಣ, ೭ಕ್ಕೆ ಬೆಳ್ಳಿ ತೊಟ್ಟಿಲ ಪೂಜೆ ನಂತರ ದೇವಸ್ಥಾನದಿಂದ ಕೋಟೆ ಮೂಲಕ ಶಿವಶರಣ ಹರಳಯ್ಯ ವೃತ್ತದವರೆಗೆ ಸ್ಥಳೀಯ ಹಾಗೂ ನಾಡಿನ ವಿವಿಧೆಡೆಯ ಕಲಾ ತಂಡಗಳ ಪ್ರದರ್ಶನದೊಂದಿಗೆ ಬೆಳ್ಳಿ ತೊಟ್ಟಿಲ ಮೆರವಣಿಗೆ ಆನೆ ಅಂಬಾರಿ, ಶರಣ ಸಂಸ್ಕೃತಿ ವೈಭವದೊದಿಗೆ ನಡೆಯಲಿದೆ. ಸಂಜೆ ೫ಕ್ಕೆ ಬಸವೇಶ್ವರ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ ನೆರವೇರಲಿದೆ. ಗುರುವಾರ ಸಂಜೆ ೫ಕ್ಕೆ ದೇವಸ್ಥಾನದಲ್ಲಿ ಪಲ್ಲಕ್ಕಿ ಮತ್ತು ನಂದಿ ಧ್ವಜ ಪೂಜೆ ಹಾಗೂ ಮೆರವಣಿಗೆ, ರಥ ಮೈದಾನದಲ್ಲಿ ರಾತ್ರಿ ೮ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶುಕ್ರವಾರ ಬೆಳಗ್ಗೆ ೭.೩೦ಕ್ಕೆ ರಥ ಮೈದಾನದಲ್ಲಿ ಜಂಗಿ ಕುಸ್ತಿ ಪ್ರದರ್ಶನ, ಸಂಜೆ ೭.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಸಂಜೆ ೫.೩೦ಕ್ಕೆ ದೇವಸ್ಥಾನದಲ್ಲಿ ನಂದಿ ಧ್ವಜ ಪೂಜೆ, ರಾತ್ರಿ ೮.೩೦ಕ್ಕೆ ಕೋಟೆ ಬಳಿ ನಂದಿ ವಿಶೇಷ ಪೂಜೆ ಮತ್ತು ಮೆರವಣಿಗೆ, ಮಧ್ಯರಾತ್ರಿ ೧೨.೩೦ಕ್ಕೆ ರಥ ಮೈದಾನದಲ್ಲಿ ಮಹಾತ್ಮ ಬಸವೇಶ್ವರರ ರಥೋತ್ಸವ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ.
ಆಕರ್ಷಕ ಬೆಳ್ಳಿ ಪಲ್ಲಕ್ಕಿ ಸಿದ್ಧ: ಬಸವೇಶ್ವರ ಜಾತ್ರೆ ಅಮೃತ ಮಹೋತ್ಸವದ ಸಂಭ್ರಮ ಸ್ಮರಣೀಯವಾಗಿಸಲು ಅದ್ದೂರಿ ಜತೆಗೆ ಅರ್ಥಪೂರ್ಣವಾಗಿ ನಡೆಯಲಿದೆ. ರಕ್ತದಾನ, ಆರೋಗ್ಯ ತಪಾಸಣೆ ಜತೆಗೆ ದೇಹದಾನ, ಅಂಗಾಂಗ ದಾನಕ್ಕೆ ನೋಂದಣಿ, ಆಯುಷ್‌ಮಾನ್ ಕಾರ್ಡ್ ವಿತರಿಸಲಾಗಿದೆ. ೨೦ ದಿನ ಆಧ್ಯಾತ್ಮಿಕ ಪ್ರವಚನ ನಡೆದಿದೆ. ಬೃಹತ್ ಕಾರ್ ರ‍್ಯಾಲಿ ಮೂಳಕ ಭರ್ಜರಿ ಪ್ರಚಾರ ಮಾಡಲಾಗಿದೆ. ೧೯೫೦ರಲ್ಲಿ ಬಾಬಾಸಾಬ್ ವಾರದ ನೇತೃತ್ವದಲ್ಲಿ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ೭೪ ವರ್ಷಗಳಿಂದ ಪ್ರತಿವರ್ಷ ಮೂರು ದಿನ ಜಾತ್ರಾ ಮಹೋತ್ಸವ ನಡೆಸಲಾಗುತ್ತಿದ್ದು, ಅಮೃತೋತ್ಸವದ ನೆನಪಿಗಾಗಿ ಅನೇಕ ಭಕ್ತರ ದೇಣಿಗೆಯಲ್ಲಿ ೭೫ ಕೆಜಿ ತೂಕದ ಆಕರ್ಷಕವಾದ ಬೆಳ್ಳಿ ಪಲ್ಲಕ್ಕಿ ಸಿದ್ಧಗೊಂಡಿರುವುದು ವಿಶೇಷ.
ಕಲ್ಯಾಣಕ್ಕೆ ವಾರದ ಕೊಡುಗೆ ದೊಡ್ಡದು: ಬಸವ ಭೂಮಿ ಕಲ್ಯಾಣಕ್ಕೆ ಸೊಲ್ಲಾಪುರದ ಆಗರ್ಭ ಶ್ರೀಮಂತ ಮನೆತನದ ಬಾಬಾಸಾಬ್ ವಾರದ ಕೊಡುಗೆ ದೊಡ್ಡದಿದೆ. ಕಲ್ಯಾಣದ ಬಗ್ಗೆ ಅವರಿಗಿದ್ದ ಭಕ್ತಿ ಇಲ್ಲಿಗೆ ಕರೆತಂದಿತು. ಬಸವಾದಿ ಶರಣರ ತತ್ವ ಪ್ರಚಾರ, ಪ್ರಸಾರ ಹಾಗೂ ಅಳಿವಿನಂಚಿನಲ್ಲಿದ್ದ ಶರಣ ಸ್ಮಾರಕಗಳ ಸಂರಕ್ಷಣೆಗೆ ಕಾಳಜಿ ವಹಿಸಿ ಪ್ರಯತ್ನಿಸಿದ್ದಲ್ಲದೆ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿ ರಚಿಸಿ ಸಾರಥ್ಯವೂ ವಹಿಸಿದ್ದರು. ೧೯೫೦ರಲ್ಲಿ ಶ್ರೀ ಬಸವೇಶ್ವರ ಜಾತ್ರೆ ಆರಂಭಿಸಿದರು. ೭೫ ವರ್ಷಗಳಿಂದ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಬಸವ ಜಯಂತಿ ನಿಮಿತ್ತ ಪ್ರತಿವರ್ಷ ಮೂರು ದಿನ ವೈಭವದ ಜಾತ್ರೆ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ವರ್ಷ ಅಮೃತ ಮಹೋತ್ಸವ ಸಂಭ್ರಮ. ಹಿಂದೆ ಖಿಲ್ಲಾ ಕಲ್ಯಾಣ ಎಂದೇ ಕರೆಯುತ್ತಿದ್ದುದನ್ನು ಬಸವಕಲ್ಯಾಣ ಎಂದು ನಾಮಕರಣ ಮಾಡುವಲ್ಲಿ ಇವರದು ಪ್ರಮುಖ ಪಾತ್ರ.
ಜಾತ್ರೆಯ ಅಮೃತ ಮಹೋತ್ಸವಕ್ಕಾಗಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲರ ಸಹಕಾರದಿಂದ ಈವರೆಗೆ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಮೂರು ದಿನದ ಜಾತ್ರಾ ಮಹೋತ್ಸವ ಸ್ಮರಣೀಯವಾಗಿಸಲು ಎಲ್ಲರೂ ಕೈಜೋಡಿಸಬೇಕು.
| ಬಸವರಾಜ ಕೋರಕೆ ಬಿಡಿಪಿಸಿ ಅಧ್ಯಕ್ಷ