ಕಲಬುರಗಿ: ಜೇವರ್ಗಿ ತಾಲೂಕಿನ ಜೇರಟಗಿಯಲ್ಲಿ ಬಸವೇಶ್ವರ ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ ಆಗ್ರಹಿಸಿದ್ದಾರೆ. ಗ್ರಾಮದ ನಾಲ್ವರು ಈ ಕೃತ್ಯ ಎಸಗಿದ್ದು, ಬಸವಾಭಿಮಾನಿಗಳ ಭಾವನೆಗಳೊಂದಿಗೆ ಚೆಲ್ಲಾ ಟ ಆಡುತ್ತಿರುವ ಇಂತಹ ಪ್ರಕರಣವನ್ನು ಸರ್ಕಾರ ಗಂಭೀರ ಪರಿಗಣಿಸಬೇಕು. ವಿಶ್ವಗುರು ಬಸವೇಶ್ವರ ಪ್ರತಿಮೆ ಮತ್ತು ಭಾವಚಿತ್ರಗಳೊಂದಿಗೆ ಅಲ್ಲಲ್ಲಿ ದುರುದ್ದೇಶದಿಂದ ಅಪಮಾನ ಮಾಡುವ ಕೃತ್ಯಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಜತೆಗೆ ಮರುಕಳಿಸದಂತೆ ಸರ್ಕಾರ ಸಿಸಿ ಕ್ಯಾಮರಾ ಅಳವಡಿಸಿ ನಿಗಾ ಇರಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.