ಸಕಲೇಶಪುರ: ಪಟ್ಟಣದ ಬಸವೇಶ್ವರ ರಸ್ತೆಯಲ್ಲಿ ಅಶ್ವರೂಢ ಬಸವಣ್ಣನ 18 ಅಡಿ ಎತ್ತರದ ಪ್ರತಿಮೆ ಶೀಘ್ರ ಅನಾವರಣಗೊಳ್ಳಲಿದೆ ಎಂದು ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದಿವಾನ್ ಹೇಳಿದರು.
ಬಸವಣ್ಣನ ಪ್ರತಿಮೆ ಸ್ಥಾಪನೆಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸಮಾನತೆಯ ಹರಿಕಾರ ಬಸವಣ್ಣ ಯಾವುದೇ ಜಾತಿ-ಮತಕ್ಕೆ ಸೀಮಿತಗೊಂಡ ಮಹಾತ್ಮರಲ್ಲ. ಎಲ್ಲ ಜಾತಿ ಸಮುದಾಯದವರೂ ಬಸವಣ್ಣನವರನ್ನು ಪೂಜ್ಯಭಾವದಿಂದ ಆರಾಧಿಸುತ್ತಾರೆ. ಇಂತಹ ಮಹಾತ್ಮರ 18 ಅಡಿ ಎತ್ತರದ ಅಶ್ವರೂಢ ಕಂಚಿನ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಪೂಜಾ ಹಾಗೂ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾರ್ಪಡಿಸಲಾಗುವುದು ಎಂದರು.
ವೀರಶೈವ ಮುಖಂಡ ಬಾಳ್ಳು ಮಲ್ಲಿಕಾರ್ಜುನ್ ಮಾತನಾಡಿದರು. ಮಾಜಿ ಶಾಸಕ ಬಿ.ಆರ್. ಗುರುದೇವ್, ಸಮಾಜದ ಕಾರ್ಯದರ್ಶಿ ಮೂಗಲಿ ಧರ್ಮಣ್ಣ, ಮುಖಂಡ ಯಡೇಹಳ್ಳಿ ಮಂಜುನಾಥ್, ಅಕ್ಕಮಹಾದೇವಿ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಲೋಕೇಶ್, ಯುವ ವೇದಿಕೆ ಅಧ್ಯಕ್ಷ ಶಶಿಕುಮಾರ್ ಮುಂತಾದವರಿದ್ದರು.