ಕೊಡೇಕಲ್: ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಜಲಾಶಯದ ಭದ್ರತೆ ದೃಷ್ಟಿಯಿಂದ ಈ ಬಾರಿ ಪ್ರವಾಸಿಗರಿಗೆ ಜಲಾಶಯ ವೀಕ್ಷಣೆಗೆ ಅನುಮತಿ ನೀಡಿಲ್ಲ ಎಂದು ಕೆಬಿಜೆಎನ್‌ಎಲ್‌ನ ಸಿಇ ಆರ್.ಮಂಜುನಾಥ ತಿಳಿಸಿದ್ದಾರೆ.
ಈಗಾಗಲೇ ಅಪಾರ ಪ್ರಮಾಣದ ನೀರಿನ ಒಳಹರಿವಿನಿಂದಾಗಿ ಬಸವಸಾಗರ ಜಲಾಶಯ ಭರ್ತಿಯಾಗಿದ್ದು, ಜಲಾಶಯದ ೨೨ ಮುಖ್ಯಕ್ರಸ್ಟ್ ಗೇಟುಗಳಿಂದ ೬೫ ಸಾವಿರ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಕೃಷ್ಣೆಗೆ ಹರಿಸಲಾಗುತ್ತಿದೆ. ಜಲಾಶಯ ತುಂಬಿ ತನ್ನ ಜೀವಕಳೆ ಹೆಚ್ಚಿಸಿಕೊಂಡಿದ್ದು, ಹೀಗಾಗಿ ವೀಕ್ಷಣೆಗಾಗಿ ದೂರದ ಊರುಗಳಿಂದ ಪ್ರವಾಸಿಗರು ನಾರಾಯಣಪುರದತ್ತ ಆಗಮಿಸುತ್ತಿದ್ದಾರೆ. ಆದರೆ ಜಲಾಶಯದ ಹಿತದೃಷ್ಟಿಯಿಂದ ಮೇಲಧಿಕಲಾರಿಗಳ ಸೂಚನೆ ಮೇರೆಗೆ ವೀಕ್ಷಣೆಗೆ ಅನುಮತಿ ನೀಡದ ಕಾರಣ ಬಂದ ದಾರಿಗೆ ಶುಂಕ ಇಲ್ಲದಂತೆ ಪ್ರವಾಸಿಗಳು ಬೇಸರದಿಂದ ಹಿಂದಿರುಗುತ್ತಿದ್ದಾರೆ.
ಗಿರಿಜಿಲ್ಲೆ ಸೇರಿ ನೆರೆಯ ಜಿಲ್ಲೆಗಳಿಂದ ಅಸಖ್ಯಾಂತ ಪ್ರವಾಸಿಗರು ಜಲಾಶಯ ವೀಕ್ಷಣೆಗೆ ಆಗಮಿಸುತ್ತಾರೆ ಆದರೆ ಜಲಾಶಯದ ಪ್ರವೇಶ ದ್ವಾರದಲ್ಲಿಯೇ ಪ್ರವಾಸಿಗರಿಗೆ ನಿರ್ಭಂದ ವಿಧಿಸಲಾಗಿದ್ದು ವೀಕ್ಷಣೆ ಅವಕಾಶವಿಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳುವ ಮೂಲಕ ಪ್ರವಾಸಿಗರನ್ನು ನಿರಾಸೆ ಉಂಟು ಮಾಡಿದೆ.
ಪ್ರಭಾವಿಗಳಿಗೆ ಮಾತ್ರ ಅವಕಾಶ: ಜಲಾಶಯ ವೀಕ್ಷಣೆ ಎಂದ ಮೇಲೆ ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಪ್ರಭಾವಿಗಳು ನಿಗಮದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅವರಿಗೆ ವೀಕ್ಷಣೆಗೆ ಅವಕಾಶ ನೀಡುತ್ತಿರುವುದು ಸರಿಯಲ್ಲ. ಭದ್ರತೆ ಎಂದ ಮೇಲೆ ಎಲ್ಲರಿಗೂ ಸರಿಸಮಾನವಾಗಿರಬೇಕು ಎಂಬುದು ಪ್ರವಾಸಿಗರ ಆರೋಪವಾಗಿದೆ. ಆದರೆ ಇಲ್ಲಿನ ಅಧಿಕಾರಿಗಳು ಮುಖ ನೋಡಿ ಮಣೆಹಾಕುತ್ತಿದ್ದಾರೆ ಎಂದು ದೂರಿದರು. ಈ ಕುರಿತು ಹಲವು ಬಾರಿ ಭದ್ರತಾ ಸಿಬ್ಬಂದಿ ಜತೆ ಪ್ರವಾಸಿಗರ ಮಾತಿನ ಚಕಮಕಿ ಕೂಡ ನಡೆದಿವೆ.